Asianet Suvarna News Asianet Suvarna News

ಎಲ್ಲ ಹಳ್ಳಿಗಳಲ್ಲಿ ಸ್ಮಶಾನ: ಆಕ್ಷೇಪಕ್ಕೆ ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಸ್ಮಶಾನಕ್ಕೆ ಜಮೀನು ಒದಗಿಸುವ ಬಗ್ಗೆ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆರೋಪಿಸಿ ವಕೀಲ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. 

High Court Instructs the Government to Reply to the Objection About Cemetery in Karnataka grg
Author
First Published Aug 10, 2023, 1:00 AM IST

ಬೆಂಗಳೂರು(ಆ.10): ರಾಜ್ಯದಲ್ಲಿ ಜನವಸತಿ ಇರುವ ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲು ಹಾಗೂ ಒತ್ತುವರಿಯಾದ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಕೈಗೊಂಡ ಕ್ರಮಗಳ ಬಗ್ಗೆ ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. 

ಸ್ಮಶಾನಕ್ಕೆ ಜಮೀನು ಒದಗಿಸುವ ಬಗ್ಗೆ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆರೋಪಿಸಿ ವಕೀಲ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಆಕ್ಷೇಪಣಾ ಪ್ರಮಾಣ ಪತ್ರ ಸಲ್ಲಿಸಿದ ಅರ್ಜಿದಾರರು, ಹೈಕೋರ್ಟ್‌ 2019ರ ಆ.20ರಂದು ನೀಡಿದ ಆದೇಶದಂತೆ ರಾಜ್ಯದಲ್ಲಿ ಜನಸವತಿ ಇರುವ ಎಲ್ಲ ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರು ಮಾಡುವ ಹಾಗೂ ಒತ್ತುವರಿಯಾದ ಸರ್ಕಾರ ಜಮೀನನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ. ಆದರೆ, ಇನ್ನೂ ಹಲವು ಗ್ರಾಮಗಳಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಿಲ್ಲ ಎಂದರು.

ಸಮೀಕ್ಷೆಯಿಂದ ಅಂಗವಿಕರನ್ನು ಕೈಬಿಟ್ಟ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ಹೈಕೋರ್ಟ್‌ ಆದೇಶ ಮಾಡಿದ್ದಾಗ ಒತ್ತುವರಿಯಾದ ಸರ್ಕಾರಿ ಜಮೀನಿನ ಪ್ರಮಾಣ 11.77 ಲಕ್ಷ ಎಕರೆಗೂ ಹೆಚ್ಚಿತ್ತು. ಸದ್ಯ ಒತ್ತುವರಿಯಾದ ಸರ್ಕಾರಿ ಜಮೀನಿನ ಪ್ರಮಾಣ 14.62 ಲಕ್ಷ ಎಕರೆ ಇದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಜಮೀನಿನ ಒತ್ತುವರಿ ಹೆಚ್ಚುತ್ತಿದೆ ಎಂದು ಆಕ್ಷೇಪಿಸಿದರು.

ಅಲ್ಲದೆ, ಮೈಸೂರು ತಾಲೂಕಿನಲ್ಲಿ ಕಳೆದ ವರ್ಷಗಳ ಹಿಂದೆ ಒತ್ತುವರಿಯಾದ 2.25 ಎಕರೆ ಸ್ಮಶಾನ ಜಾಗವನ್ನೂ ಈವರೆಗೂ ತೆರವುಗೊಳಿಸಿಲ್ಲ. ತಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರವೇ 16 ಗ್ರಾಮಗಳಲ್ಲಿ ಮುಸ್ಲಿಂ, ಬೌದ್ಧ ಹಾಗೂ ಜೈನ ಸಮುದಾಯದ ನಿವಾಸಿಗಳು ಸ್ಮಶಾನಕ್ಕಾಗಿ ಹೆಚ್ಚುವರಿ ಭೂಮಿ ಮಂಜೂರಾತಿಗೆ ಕೋರಿದ್ದಾರೆ. ಆ ಮನವಿಯನ್ನು ಸರ್ಕಾರ ಪರಿಗಣಿಸಬೇಕಿದೆ. ಹಾಸನ ಜಿಲ್ಲೆ ಅರಕಲಗೋಡಿನಲ್ಲಿ ಕಳೆದ ತಿಂಗಳು ದಲಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ಜಾಗ ಇಲ್ಲದ ಕಾರಣ ಮೃತರ ಮನೆ ಮುಂದೆಯೇ ಶವಸಂಸ್ಕಾರ ನಡೆಸಲಾಗಿದೆ. ಆ ಸ್ಥಳಕ್ಕೆ ತಾವು ಭೇಟಿ ನೀಡಿದ್ದೆ. ಇನ್ನೂ ಸ್ಮಶಾನಕ್ಕೆ ಜಾಗ ಒದಗಿಸಬೇಕಾಗಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟನಿದರ್ಶನವೆಂದು ಪ್ರಮಾಣಪತ್ರದಲ್ಲಿ ಅರ್ಜಿದಾರರು ಆಕ್ಷೇಪಿಸಿದ್ದಾರೆ.

Follow Us:
Download App:
  • android
  • ios