ದತ್ತ ಜಯಂತಿಗೆ ಹೈಕೋರ್ಚ್ ಅಸ್ತು; ಡಿ.6 ರಿಂದ ಮೂರು ದಿನ ಜಯಂತಿ
- ದತ್ತ ಜಯಂತಿಗೆ ಹೈಕೋರ್ಚ್ ಅಸ್ತು
- ಡಿ.6ರಿಂದ 3 ದಿನ ಬಾಬಾಬುಡನ್‌ಗಿರಿಯಲ್ಲಿ ಜಯಂತಿ
- ನಿತ್ಯ ಉಭಯ ಸಮುದಾಯದಿಂದ ದತ್ತ ಪಾದುಕೆಗೆ ಪೂಜೆ

ಬೆಂಗಳೂರು (ಡಿ.1) : ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಇದೇ ಡಿಸೆಂಬರ್ 6 ರಿಂದ ಮೂರು ದಿನಗಳ ಕಾಲ ದತ್ತಾತ್ರೇಯ ಜಯಂತಿ ಆಚರಣೆ ಮಾಡಲು ಅನುಮತಿ ನೀಡಿ ಹೈಕೋರ್ಚ್ ಬುಧವಾರ ಅನುಮತಿಸಿದೆ.
ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ತಮ್ಮನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಚ್ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಸಲ್ಲಿಸಿರುವ ಮೇಲ್ಮನವಿ, ಬುಧವಾರ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
Datta Jayanthi: ವಿಹಿಂಪ, ಬಜರಂಗದಳದ ದತ್ತಜಯಂತಿ ಇಂದಿನಿಂದ ಆರಂಭ: ಸಿಟಿ ರವಿ ಸೇರಿ 100 ಜನರ ಮಾಲಾರ್ಪಣೆ
ಈ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ, ಡಿಸೆಂಬರ್ 6, 7 ಮತ್ತು 8 ಎಂದು ದತ್ತಾತ್ರೇಯ ಜಯಂತಿ ನಡೆಸಲು ಉದ್ದೇಶಿಸಲಾಗಿದೆ. ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನದ ಉಸ್ತುವಾರಿ ವಹಿಸಲು ರಚಿಸಿರುವ ವ್ಯವಸ್ಥಾಪನಾ ಸಮಿತಿಯು ದತ್ತಾತ್ರೇಯ ಜಯಂತಿ ಆಚರಣೆಗೆ ಎಲ್ಲ ಸಿದ್ಧತೆ ನಡೆಸಿದೆ. ಅಲ್ಲದೆ, ಇಸ್ಲಾಂ ಮತ್ತು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಸಮಿತಿಯಿಂದ ಅರ್ಚಕ ಹಾಗೂ ಮುಜಾವರ್ ಅವರನ್ನು ನೇಮಿಸಲಾಗಿದೆ. ಪ್ರತಿದಿನ ಈ ಎರಡೂ ಸಮುದಾಯದವರಿಂದ ದತ್ತ ಪಾದುಕೆಗೆ ಪೂಜೆ ನಡೆಯುತ್ತಿದೆ. ಆದ್ದರಿಂದ ದತ್ತಾತ್ರೇಯ ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಕೋರಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ದತ್ತಾತ್ರೇಯ ಜಯಂತಿ ಆಚರಣೆಗೆ ಅನುಮತಿ ನೀಡಿ ವಿಚಾರಣೆಯನ್ನು 2023ರ ಜ.12ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಚ್ ಏಕ ಸದಸ್ಯ ನ್ಯಾಯಪೀಠ, ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28ಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿದ್ದೀನ್ ಮೇಲ್ಮನವಿ ಸಲ್ಲಿಸಿದ್ದರು.
Datta Jayanti: ಡಿ.8ರಂದು ದತ್ತಜಯಂತಿ: ಬಜರಂಗದಳ, ವಿಹಿಂಪ ನೇತೃತ್ವ
ಮೇಲ್ಮನವಿಯು 2022ರ ಆ.22ರಂದು ವಿಚಾರಣೆಗೆ ಬಂದ ವೇಳೆ, ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022ರ ಜು.19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆ.17ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತ್ತು.