ಬೆಂಗಳೂರು(ಜು.17):  ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ಬಂಧನಕ್ಕೆ ಒಳಗಾದ ಪ್ರಕರಣದಲ್ಲಿ ಎರಡು ಕೋರ್ಟ್‌ಗಳಲ್ಲಿ ಪ್ರತ್ಯೇಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಕಾರಣಕ್ಕೆ ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಸೇರಿ 22 ಮಂದಿಗೆ ಹೈಕೋರ್ಟ್‌ ತಲಾ 5 ಸಾವಿರ ದಂಡ ವಿಧಿಸಿದೆ.

ಇಮ್ರಾನ್‌ ಪಾಷಾ ಹಾಗೂ ಇತರೆ 22 ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಇದಕ್ಕೂ ಮುನ್ನ ಆರೋಪಿಗಳ ಪರ ವಕೀಲರು, ಅರ್ಜಿದಾರರು ಪ್ರಕರಣದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದು, ಜಾಮೀನು ಅರ್ಜಿ ಹಿಂಪಡೆಯಲು ಅನುಮತಿ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲ ತೇಜಸ್‌, ಇದೇ ಪ್ರಕರಣದಲ್ಲಿ ಅರ್ಜಿದಾರರೆಲ್ಲರೂ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಒಂದೇ ಪ್ರಕರಣದಲ್ಲಿ ಹೈಕೋರ್ಟ್‌ ಹಾಗೂ ಎಸಿಎಂಎಂ ಕೋರ್ಟಿಗೂ ಅರ್ಜಿ ಸಲ್ಲಿಸಿದ್ದಾರೆ. ಎಸಿಎಂಎಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರವನ್ನು ಹೈಕೋರ್ಟ್‌ ತಿಳಿಸದೆ ಮರೆ ಮಾಚಿದ್ದಾರೆ. ಹೀಗಾಗಿ, ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಹಿಂಪಡೆಯಲು ಅವಕಾಶ ನೀಡುವುದಾದರೆ ಸೂಕ್ತ ದಂಡ ವಿಧಿಸಿ ಅನುಮತಿ ನೀಡಬೇಕು ಎಂದು ಕೋರಿದರು.

ಕಾರ್ಪೊರೇಟರ್ ಇಮ್ರಾನ್ ಪಾಷಾ ಸೇರಿ 23 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಅದನ್ನು ಪರಿಗಣಿಸಿದ ನ್ಯಾಯಪೀಠ, ಒಂದೇ ಆರೋಪದ ಕುರಿತ ಪ್ರಕರಣದಲ್ಲಿ ಜಾಮೀನು ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಎಲ್ಲ 22 ಆರೋಪಿಗಳಿಗೂ ತಲಾ 5 ಸಾವಿರ ದಂಡ ವಿಧಿಸಿತು. ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ಪಾವತಿಸುವಂತೆ ಸೂಚಿಸಿ ಅರ್ಜಿ ಹಿಂಪಡೆಯಲು ಅನುಮತಿ ನೀಡಿತು.

ಅರ್ಜಿದಾರರು ನಿಗದಿತ ಅವಧಿಯಲ್ಲಿ ದಂಡ ಪಾವತಿ ಮಾಡದೆ ಹೋದರೆ, ದಂಡದ ಮೊತ್ತವನ್ನು ಆರೋಪಿಗಳ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ಕಾನೂನು ಪ್ರಕಾರ ವಸೂಲಿ ಮಾಡಲು ಸರ್ಕಾರ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.