Asianet Suvarna News Asianet Suvarna News

ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರದ ಅನುಮತಿ ಇಲ್ಲ: ಹೈಕೋರ್ಟ್‌ ಕಿಡಿ

ಸಿಬಿಐ ಕೋರಿಕೆ ಸಲ್ಲಿಸಿದ್ದರೂ ಸರ್ಕಾರ ವಿಳಂಬವೇಕೆ?, ಏಕೆ ವಿಳಂಬ ಮಾಡಿದ್ದೀರಿ?, ಆರೋಪಿ ಪ್ರಭಾವಿ ಎಂಬ ಕಾರಣಕ್ಕೆ ಸುಮ್ಮನಿರಕೂಡದು, ಕೂಡಲೇ ಅರ್ಜಿ ಪರಿಶೀಲಿಸಬೇಕು ಎಂದು ಆದೇಶ. 

High Court  Displeasure with the Government Action on Janardhana Reddy Case grg
Author
First Published Jan 11, 2023, 8:27 AM IST

ಬೆಂಗಳೂರು(ಜ.11):  ಅಕ್ರಮ ಗಣಿಗಾರಿಕೆ ಪ್ರಕರಣದ ಮೊದಲ ಆರೋಪಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಸುಮಾರು 19 ಕೋಟಿ ರು. ಮೌಲ್ಯದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಮನವಿ ಪತ್ರ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಅದನ್ನು ಪರಿಗಣಿಸಿಲ್ಲ. ಸರ್ಕಾರದ ಈ ಕ್ರಮಕ್ಕೆ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡಲು ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, ಸಿಬಿಐ ಮನವಿ ಪರಿಗಣಿಸಲು ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ತಿಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಜನಾರ್ದನ ರೆಡ್ಡಿಗೆ ಬೆಂಬಲ: ಬಿಜೆಪಿಯಲ್ಲಿ ಮುಂದುವರೆದ ರಾಜೀನಾಮೆ ಪರ್ವ..!

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆರೋಪಿ ಪ್ರಭಾವಿ ಎಂಬ ಮಾತ್ರಕ್ಕೆ ವಿಳಂಬ ಮಾಡುವುದು ಸರಿಯಲ್ಲ. ಸರ್ಕಾರದ ದೃಷ್ಟಿಯಲ್ಲಿ ಸಿಬಿಐ ಮನವಿ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವುದು ಒಂದು ಕ್ರಮ ಆಗಿರಬಹುದು. ಆದರೆ, ಆ ನಡೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆದ್ದರಿಂದ ಅರ್ಜಿಗೆ ಸರ್ಕಾರ ಪ್ರತಿಕ್ರಿಯಿಸಬೇಕು’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತು.

ಆಸ್ತಿ ಮಾರಾಟಕ್ಕೆ ರೆಡ್ಡಿ ಯತ್ನ- ಸಿಬಿಐ:

ಇದಕ್ಕೂ ಮುನ್ನ ಸಿಬಿಐ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್‌, ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿದೆ. ಸರ್ಕಾರದ ಬೊಕ್ಕಸಕ್ಕೆ 198 ಕೋಟಿ ರು. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಹೆಚ್ಚುವರಿ ತನಿಖೆ ನಡೆಸಿ 19 ಕೋಟಿ ರು. ಮೌಲ್ಯದ 219 ಹೆಚ್ಚುವರಿ ಆಸ್ತಿ ಗುರುತಿಸಲಾಗಿದೆ. ಅದನ್ನು ಜಪ್ತಿ ಪ್ರಕ್ರಿಯೆ ಆರಂಭಿಸಲು ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರದ ಮುಖ್ಯ ಕಾಯದರ್ಶಿಗೆ 2022ರ ಆಗಸ್ಟ್‌ 30ರಂದು ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಆ ಮನವಿ ಸಂಬಂಧ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಆ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ನ್ಯಾಯಪೀಠ ಗಮನಕ್ಕೆ ತಂದರು.

Follow Us:
Download App:
  • android
  • ios