ಕಲಬುರಗಿ ಹೈಕೋರ್ಟ್ ಆಳಂದ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಸಿದ್ದಲಿಂಗ ಸ್ವಾಮಿಜಿ ಹೊರತುಪಡಿಸಿ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕಲಬುರಗಿ (ಫೆ.25): ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡುವುದಕ್ಕೆ ಕಲಬುರಗಿ ಹೈಕೋರ್ಟ ಪೀಠದಿಂದ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ (Ladle mashak dargah) ರಾಘವಚೈತನ್ಯ ಶಿವಲಿಂಗದ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಸಿದ್ದಲಿಂಗ ಸ್ವಾಮಿಜಿ ಹೊರತಪಡಿಸಿ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಒಟ್ಟು 500 ಜನರಿಗೆ ಅನುಮತಿ ಕೇಳಿದ್ದರು. ಆದರೆ, ಕೋರ್ಟ್ ಕೇವಲ 15 ಜನರಿಗೆ ಮಾತ್ರ ಅನುಮತಿ ಕೊಟ್ಟಿದೆ.
ಆಳಂದ ಪಟ್ಟಣದಲ್ಲಿರುವ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾ 14ನೇ ಶತಮಾನದಿಂದಲೂ ಪ್ರಸಿದ್ಧಿಯಲ್ಲಿದೆ. ಈ ದರ್ಗಾದ ಆವರಣದಲ್ಲಿ 15ನೇ ಶತಮಾನದಲ್ಲಿ ಶಿವಾಜಿ ಮಹಾರಾಜರ ಗುರು, ಸಂತ ರಾಘವ ಚೈತನ್ಯರ ಸಮಾಧಿಯಿದೆ. ಈ ರಾಘವ ಚೈತನ್ಯರ ಸಮಾಧಿ ಮೇಲೆ ಶಿವಲಿಂಗ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಇನ್ನು ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜಿಸಿ, ನಮಸ್ಕರಿಸಿ ಬರುತ್ತಿದ್ದರು. ಜೊತೆಗೆ, ಇಲ್ಲಿನ ಸ್ಥಳೀಯ ಜೋಶಿ ಎಂಬ ಕುಟುಂಬದವರು ಶಿವಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು.
15ನೇ ಶತಮಾನದಿಂದ ಕಳೆದ 2022ನೇ ಇಸವಿಯವರೆಗೂ ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ-ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು. ಆದರೆ, 2022ರಲ್ಲಿ ಶಿವಲಿಂಗದ ಮೇಲೆ ಅನ್ಯ ಕೋಮಿನ (ಮುಸ್ಲಿಂ) ಕಿಡಿಗೇಡಿ ಯುವಕರು ಮಲ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ಧೀಕರಣ ಮಾಡುವುದಕ್ಕೆ ತೆರಳಿದ್ದರು. ಈ ವೇಳೆ ಅನ್ಯ ಕೋಮಿನ ಜನ ಶಿವಲಿಂಗ ಶುದ್ಧೀಕರಣ ಮಾಡಿ ಹೊರಬರುತ್ತಿದ್ದವರ ಮೇಲೆ ಏಕಾಏಕಿ ಮಾರಕಾಸ್ತ್ರ ಮತ್ತು ಬಡಿಗೆ ಹಿಡಿದು ಹಲ್ಲೆ ಮಾಡಿ, ಕಲ್ಲು ತೂರಾಟ ನಡೆಸಿದ್ದರು. ಅಂದಿನಿಂದ ಈ ಶಿವಲಿಂಗ ಪೂಜೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಇದೀಗ ಸಿದ್ರಾಮಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಯಿಂದ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ವೇಳೆ ವಕ್ಫ ಮಂಡಳಿ ಇಲ್ಲಿ ಶಿವಲಿಂಗವೇ ಇಲ್ಲ ಎಂದು ವಾದ ಮಂಡಿಸಿತ್ತು. ಆದರೆ, ಸ್ಥಳ ಪರಿಶೀಲನೆ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಂಡ ಕಲಬುರಗಿ ಹೈಕೋರ್ಟ್ ಪೀಠದಿಂದ ಮಹತ್ವ ಆದೇಶ ಹೊರಡಿಸಲಾಗಿದೆ. ಹಿಂದೂ ಮುಖಂಡರಿಂದ 500 ಜನರು ಶಿವಲಿಂಗ ಪೂಜೆಗೆ ಅನುಮತಿ ಕೇಳಿದ್ದನ್ನು ನಿರಾಕರಿಸಿ ಕೇವಲ 15 ಜನರಿಗೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: Kalaburgi: ಪೊಲೀಸ್ ಸರ್ಪಗಾವಲಲ್ಲಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ನೆರವೇರಿದ ಉರುಸ್-ಶಿವಲಿಂಗ ಪೂಜೆ
ಇನ್ನು ಶಿವರಾತ್ರಿಗೆ ಮುನ್ನ ಮುಂಜಾಗ್ರತಾ ಕ್ರಮವಾಗಿ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟವನ್ನು ಮಂಗಳವಾರ (ಫೆ.25) ರಾತ್ರಿ 11 ಗಂಟೆಯಿಂದ ಫೆ.27ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.
