Kalaburgi: ಪೊಲೀಸ್ ಸರ್ಪಗಾವಲಲ್ಲಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ನೆರವೇರಿದ ಉರುಸ್-ಶಿವಲಿಂಗ ಪೂಜೆ
ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲಾಗಿದೆ. ಆಂದೋಲ ಶ್ರೀ ಮತ್ತು 15 ಜನರ ತಂಡ ಆಳಂದ್ ಲಾಡ್ಲೆ ಮಾಶಾಕ್ ದರ್ಗಾ ಅವರಣದಲ್ಲಿರೋ ರಾಘವ್ ಚೈತನ್ಯ ಶಿವಲಿಂಗಕ್ಕೆ ಅಭಿಷೇಕ ಹಾಗೂ ರುದ್ರ ಪೂಜೆ ನೆರವೇರಿಸಿದ್ದಾರೆ.
ಅಳಂದ (ಫೆ.18): ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲಾಗಿದೆ. ಆಂದೋಲ ಶ್ರೀ ಮತ್ತು 15 ಜನರ ತಂಡ ಆಳಂದ್ ಲಾಡ್ಲೆ ಮಾಶಾಕ್ ದರ್ಗಾ ಅವರಣದಲ್ಲಿರೋ ರಾಘವ್ ಚೈತನ್ಯ ಶಿವಲಿಂಗಕ್ಕೆ ಅಭಿಷೇಕ ಹಾಗೂ ರುದ್ರ ಪೂಜೆ ನೆರವೇರಿಸಿದ್ದಾರೆ. ಕೋರ್ಟ್ ಆದೇಶದಂತೆ ಬೆಳಗಿನ 12 ಗಂಟೆಯೊಳಗೆ ಉರುಸ್ ಧಾರ್ಮಿಕ ವಿಧಿ ವಿಧಾನ ಪೂರೈಸಿ ಹೊರಬಂದ ಮುಸ್ಲಿಂ ಬಾಂಧವರು ಬಳಿಕ ಮಧ್ಯಾಹ್ನ 3 ಗಂಟೆಗೆ ಪೂಜೆಗೆ ತೆರಳಿದ ಹಿಂದು ಬಾಂಧವರು ದರ್ಗಾ ಅಂಗಳದಲ್ಲಿರೋ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ- ಅಭಿಷೇಕ ನೆರವೇರಸಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ಪಥ ಸಂಚಲನ ನಡೆಸಿದ್ದ ಪೊಲೀಸ್ ಇಲಾಖೆ:
ಜಿಲ್ಲೆಯ ಅಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸುವುದಕ್ಕೆ ಹಾಗೂ ಅದೇ ದಿನ ಲಾಡ್ಲೇ ಮಶಾಕ್ ದರ್ಗಾ ಉರುಸ್ ನಡೆಸಲಿಕ್ಕೂ ಮುಸ್ಲಿಮ್ ಸಮುದಾಯಕ್ಕೆ ಕಲಬುರಗಿ ಟ್ರಿಬ್ಯುನಲ್ ಕೋರ್ಟ್ ಅನುಮತಿಸಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರಣಕ್ಕೆ ಪೊಲೀಸ್ ಇಲಾಖೆ ಕಳೆದ ಗುರುವಾರ ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ಖಡಕ್ ಸಂದೇಶ ರವಾನಿಸಿತ್ತು.
ಕಳೆದ ಶಿವರಾತ್ರಿ ವೇಳೆ ಆಳಂದ ಕೋಮು ಗಲಭೆಗೆ ಸಾಕ್ಷಿಯಾಗಿದ್ದ ಹಿನ್ನೆಲೆಯಲ್ಲಿ ಖುದ್ದು ಕಾನೂನು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ ಕುಮಾರ್ ಗುರುವಾರ ಪಥ ಸಂಚಲನದ ನೇತೃತ್ವ ವಹಿಸಿ ಗಮನ ಸೆಳೆದಿದ್ದರು. ಆಳಂದ ಶ್ರೀರಾಮ ಮಾರುಕಟ್ಟೆಪ್ರದೇಶ, ದರ್ಗಾ ಸುತ್ತಲಿನ ರಸ್ತೆಗಳು ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಎಸ್ಸಾರ್ಪಿ, ಕ್ಷಿಪ್ರಕಾರ್ಯದಳದ ಸಿಬ್ಬಂದಿ, ಡಿಎಆರ್ ತುಕಡಿಗಳೂ ಪಥ ಸಂಚಲನ ನಡೆಸಿತ್ತು.
ವಕ್ಫ್ ಟ್ರಿಬ್ಯುನಲ್ ಕೋರ್ಟ್ ಆದೇಶ ಚಾಚು ತಪ್ಪದಂತೆ ತಾವು ಪಾಲಿಸೋದಾಗಿ ಸ್ಪಷ್ಟಪಡಿಸಿದ್ದ ಅಲೋಕ ಕುಮಾರ್ ಆದೇಶದಂತೆಯೇ ಪೂಜೆಗೆ ಸೀಮಿತ ಸಂಖ್ಯೆಯಲ್ಲಿ ಅನುಮತಿಸಲಾಗಿತ್ತು. ಉಭಯ ಕೋಮಿನವರೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಪ್ರತ್ಯೇಕ ಸಮಯ ನಿಗದಿ:
ಟ್ರಿಬ್ಯುನಲ್ ಆದೇಶದಲ್ಲಿ ಫೆ.18ರ ಶಿವರಾತ್ರಿ ಹಬ್ಬದಂದೇ ಉರುಸ್ ಇರುವ ಹಿನ್ನೆಲೆ ಬೆ.8ಗಂಟೆಯಿಂದ 2ರ ವರೆಗೆ ಮುಸ್ಲಿಮರಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು. ಅದೇ ದಿನ ಮದ್ಯಾಹ್ನ 2ರಿಂದ ಸಂಜೆ 6ರವರೆಗೆ ಹಿಂದೂಗಳಿಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಲಾಗಿತ್ತು. ಉಭಯ ಕೋಮಿನ ಕೇವಲ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅಲ್ಲಿಗೆ ಬಂದರೆ ಶಾಂತಿ ಭಂಗವಾಗುತ್ತದೆ. ಹಾಗಾಗಿ ಶಿವರಾತ್ರಿ ಪೂಜೆಗೆ ಅನುಮತಿ ಬೇಡ ಎಂದು ಅಲ್ಪಸಂಖ್ಯಾತ ಮುಖಂಡರು ವಕ್ಫ ಬೋರ್ಡ್ ಕೋರ್ಟ್ ಮೆಟ್ಟಿಲೇರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:
ಯಾವುದೇ ಕಾರಣಕ್ಕೂ ಶಾಂತಿಗೆ ಭಂಗ ಬಾರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕಳೆದ ಶಿವರಾತ್ರಿ ದಿನ ಭಾರೀ ಗಲಾಟೆಯಾಗಿದ್ದ ಕಾರಣ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆ ಹಾಗೂ ಲಾಡ್ಲೆ ಮಶಾಕ್ ಸಂದಲ್ ಕಾರ್ಯಕ್ರಮದಲ್ಲಿ ಖಾಕಿಪಡೆಯೇ ಕಾಣುತ್ತಿತ್ತು. ಪೂಜೆ, ಉರುಸ್ ಆದಮೇಲೆ ಸಂಜೆ 6 ಗಂಟೆ ನಂತರ ಸ್ಥಳದಲ್ಲಿ ಯಾರೂ ಇರುವಂತಿಲ್ಲ ಎಂದು ಕೂಡ ಎಸ್ಪಿ ಇಶಾ ಪಂತ್ ಸಂದೇಶ ರವಾನಿಸಿದ್ದರು.
ಭದ್ರತೆಗಾಗಿ 1050 ಜನ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಓರ್ವ ಪೋಲಿಸ್ ವರಿಷ್ಠಾಧಿಕಾರಿ, 9 ಜನ ಡಿವೈಎಸ್ಪಿ, 26 ಜನ ಸಿಪಿಐ, 73 ಜನ ಪಿಎಸ್‌ಐ ಹಾಗೂ 97 ಜನ ಎಎಸ್‌ಐಗಳನ್ನು ನಿಯೋಜಿಸಲಾಗಿತ್ತು. 11 ಕೆಎಸ್‌ಆರ್ಪಿ, ನಾಲ್ಕು ಕ್ಯೂಆರ್ಟಿ, ಡಿಎಆರ್ ತುಕಡಿಗಳನ್ನು ಬಳಕೆ ಮಾಡಲಾಗಿತ್ತು.
Gadag: ದಿನದಿಂದ ದಿನಕ್ಕೆ ಬೆಳೆಯುತ್ತಿದೆ ವಿಠ್ಠಲ ರುಕ್ಮಿಣಿ ಕಲ್ಲಿನ ವಿಗ್ರಹ!
ಆಳಂದ್ ಪಟ್ಟಣದ ಎರಡು ಕಿ.ಮೀ. ವ್ಯಾಪ್ತಿಯವರೆಗೆ ಒಟ್ಟು 12ಕ್ಕಿಂತ ಅಧಿಕ ಚೆಕ್ ಪೋಸ್ಟ್‌ಳನ್ನು ನಿರ್ಮಾಣ ಮಾಡಲಾಗಿತ್ತು. ಆಳಂದ್ ಪ್ರವೇಶ ಮಾಡುವ ಪ್ರತಿ ವಾಹನ ತಪಾಸಣೆ ಬಳಿಕವೇ ಮುಂದೆ ಸಾಗುತ್ತಿತ್ತು.
KODAGU MAHASHIVRATRI: ಕೂರ್ಗ್‌ನಲ್ಲಿ ಸಂಭ್ರಮದ ಶಿವರಾತ್ರಿ ಉತ್ಸವ, ಕಾಶಿ ಶಿವಲಿಂಗಕ್ಕೆ ವಿವಿಧ ಅಭಿಷೇಕ
ಅತ್ಯಾಧುನಿಕ ಡ್ರೋಣ್ ಗಣ್ಗಾವಲು:
ಆಳಂದ್ ಮೊಹಲ್ಲಾ ಕಮಿಟಿ ಜೊತೆಗೆ ಸಭೆ ನಡೆಸಿ ನ್ಯಾಯಾಲಯದ ಆದೇಶ ಪರಿಪಾಲನೆಗೆ ಸಲಹೆ ಸೂಚನೆ ನೀಡಲಾಗಿತ್ತು. ಡ್ರೋಣ್ ಮೂಲಕ ಹದ್ದಿನ ಕಣ್ಣು ಇರಿಸಲಾಗಿತ್ತು. ಕಳೆದ ಬಾರಿ ಗಲಾಟೆ ಮಾಡಿದವರ ಮೇಲೆ ಈಗಾಗಲೇ 107 ಐಪಿಸಿ ಪ್ರಕರಣ ದಾಖಲಿಸಲಾಗಿದೆ. ಓರ್ವನನ್ನು ಗಡಿಪಾರು ಸಹ ಮಾಡಲಾಗಿದೆ.