ಒಂದು ವಿಶೇಷ ವಿಷಯವನ್ನು ಆಧಾರವನ್ನಾಗಿಟ್ಟುಕೊಂಡು ಹೆಗ್ಗೋಡಿನ ನೀನಾಸಂನಲ್ಲಿ ನಡೆಯುವ ಸಾಂಸ್ಕೃತಿ ಶಿಬಿರದ ಈ ವರ್ಷದ ವಿವರ.

ಸಾಗರ: ತಾಲೂಕಿನ ಹೆಗ್ಗೋಡಿನಲ್ಲಿ ಅ.6ರಿಂದ 10ರವರೆಗೆ ನೀನಾಸಮ್‌ ಸಂಸ್ಕ ೃತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಕರ್ನಾಟಕ ಮತ್ತು ಹೊರಗಿನ ಹಲವು ಪ್ರಮುಖರು ಸಂಪನ್ಮೂಲ ವ್ಯಕ್ತಿಗಳಾಗಿಯೂ ಮತ್ತು ಕರ್ನಾಟಕದ ವಿವಿಧ ಭಾಗಗಳ 150ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳಾಗಿಯೂ ಭಾಗವಹಿಸುತ್ತಾರೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳೂ ಹಾಗೂ ಸಂವಾದ- ಚರ್ಚೆಗಳೂ ನಡೆಯುತ್ತವೆ. ಪ್ರತಿದಿನ ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯುತ್ತದೆ.

ಈ ಬಾರಿಯ ಸಂಸ್ಕೃತಿ ಶಿಬಿರವು ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ವಿಷಯವನ್ನು ಕುರಿತು ಕೇಂದ್ರೀಕರಿಸುತ್ತದೆ. ಶಿಬಿರದ ಹಗಲಿನ ಕಾರ್ಯಕ್ರಮಗಳಲ್ಲಿ ಉಪನ್ಯಾಸ ಮತ್ತು ಚರ್ಚೆಗಳೇ ಅಲ್ಲದೆ, ಕಾವ್ಯ-ನಾಟಕ-ಚಲನಚಿತ್ರ ಮಾಧ್ಯಮದ ಕೆಲವು ಕಿರುಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಗಳು ಕೂಡಾ ನಡೆಯಲಿವೆ.

ಶಿಬಿರದಲ್ಲಿ ತ್ರಿದೀಪ್‌ ಸುಹೃದ್‌, ಕ್ಲಾಡ್‌ ಆಳ್ವಾರೆಸ್‌, ನಾರ್ಮಾ ಆಳ್ವಾರೆಸ್‌, ಸಮೀಕ್‌ ಬಂದೋಪಾಧ್ಯಾಯ, ಚಂದ್ರಶೇಖರ ಕಂಬಾರ, ಗೋಪಾಲ ಗುರು, ಪ್ರಕಾಶ ಆಮ್ಟೆ, ಸುಂದರ ಸಾರುಕ್ಕೆ, ಪ್ರಥ್ವೀದತ್ತ ಚಂದ್ರಶೋಭಿ, ಅತುಲ್‌ ತಿವಾರಿ, ವಿವೇಕ ಶಾನಭಾಗ, ಎಂ.ಎಸ್‌. ಶ್ರೀರಾಮ್‌, ಜಿ.ಎಸ್‌. ಜಯದೇವ, ಸಂಜೀವ ಕುಲಕರ್ಣಿ, ಸುಕನ್ಯಾ ರಾಮಗೋಪಾಲ್‌, ಬನ್ನಂಜೆ ಸಂಜೀವ ಸುವರ್ಣ, ಸದಾನಂದ ಮಯ್ಯ, ಶಿವಾನಂದ ಕಳವೆ, ವೈದೇಹಿ, ದೀಪಾ ಗಣೇಶ್‌, ಎನ್‌.ಎಸ್‌. ಗುಂಡೂರ್‌, ಜಯರಾಮ ಪಾಟೀಲ್‌ ಮೊದಲಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದು, ಶಿಬಿರದ ಸಂಚಾಲಕರಾಗಿ ಟಿ.ಪಿ. ಅಶೋಕ್‌, ಜಸವಂತ ಜಾಧವ್‌ ಕೆಲಸ ಮಾಡಲಿದ್ದಾರೆ.

ಪ್ರತಿದಿನ ಸಂಜೆ 7-15ರಿಂದ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಅ.6ರಂದು ನೀನಾಸಮ್‌ ತಿರುಗಾಟ ನಾಟಕ ‘ಸೇತುಬಂಧನ’ (ನಿ: ಅಕ್ಷರ ಕೆ.ವಿ.), ಅ.7 ರಂದು ತಿರುಗಾಟ ನಾಟಕ ‘ಆಶ್ಚರ್ಯ ಚೂಡಾಮಣಿ’ (ನಿ: ಜೋಸೆಫ್‌ ಜಾನ್‌), ಅ.8ರಂದು ನೀನಾಸಮ್‌ ನಾಟಕ ‘ಈಡಿಪಸ್‌’ (ನಿ: ಗಣೇಶ್‌ ಮಂದರ್ತಿ), ಅ.9ರಂದು ಆಹ್ವಾನಿತ ತಮಿಳು ನಾಟಕ ‘ಪೂಳಿಪ್ಪಾವೈ’ (ನಿ: ಮುರುಗ ಬೂಪತಿ ಶಣ್ಮುಗಮ್‌), ಅ.10ರಂದು ಆಹ್ವಾನಿತ ಕನ್ನಡ ನಾಟಕ ‘ಕೊಳ’ (ನಿ: ಅಚ್ಯುತಕುಮಾರ್‌) ಪ್ರದರ್ಶನಗೊಳ್ಳಲಿದೆ ಎಂದು ನೀನಾಸಮ್‌ ತಿಳಿಸಿದೆ.