ರಾಜ್ಯ ಸರ್ಕಾರ ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ನೀಡದೆ ವಂಚಿಸಿದೆ. ಇದು 5000 ಕೋಟಿ ರು. ಹಗರಣ. ಹಣದ ಕುರಿತು ಸದನಕ್ಕೆ ಮಾಹಿತಿ ನೀಡಬೇಕಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾಣೆಯಾಗಿದ್ದಾ ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.

ಸುವರ್ಣವಿಧಾನಸೌಧ : ರಾಜ್ಯ ಸರ್ಕಾರ ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ನೀಡದೆ ವಂಚಿಸಿದೆ. ಇದು 5000 ಕೋಟಿ ರು. ಹಗರಣ. ಗೃಹಲಕ್ಷ್ಮಿ ಹಣದ ಕುರಿತು ಸದನಕ್ಕೆ ಮಾಹಿತಿ ನೀಡಬೇಕಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾಣೆಯಾಗಿದ್ದಾರೆ. ಖಜಾನೆ ಖಾಲಿಯಾಗಿದೆಯೇ ಅಥವಾ ಆ ಹಣ ಬಿಹಾರ ಚುನಾವಣೆಗೆ ಖರ್ಚಾಗಿದೆಯೇ ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.

ಈ ಬಗ್ಗೆ ರಾಜ್ಯ ಬಿಜೆಪಿಯು ಅಧಿಕೃತ ಎಕ್ಸ್‌ ಖಾತೆ ಮೂಲಕ ಟ್ವೀಟ್‌ ಮಾಡಿದ್ದು, ರಾಜ್ಯ ಸರ್ಕಾರ ಹಣ ನೀಡದೆ ವಂಚಿಸಿದೆ. ನಮ್ಮ ಪ್ರಶ್ನೆ ಇಷ್ಟೇ, ಗೃಹಲಕ್ಷ್ಮಿ ಹಣ ಯಾಕೆ ನೀಡಿಲ್ಲ? ಖಜಾನೆ ಖಾಲಿ ಆಗಿದೆಯೇ ಅಥವಾ ಗೃಹ ಲಕ್ಷ್ಮಿ ಗ್ಯಾರಂಟಿಗೆ ಮೀಸಲಿಟ್ಟಿದ್ದ ಹಣ ಬಿಹಾರ ಚುನಾವಣೆಗೆ ಖರ್ಚಾಗಿದೆಯೇ ಸ್ಪಷ್ಟಪಡಿಸಿ ಸಿದ್ದರಾಮಯ್ಯ ಅವರೇ ಎಂದು ಒತ್ತಾಯ ಮಾಡಿದೆ.

5,000 ಕೋಟಿ ರು. ಹಗರಣ- ಅಶೋಕ್‌:

ಇದೇ ವಿಚಾರ ಸದನದಲ್ಲೂ ಪ್ರತಿಧ್ವನಿಸಿದ್ದು ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಬೇಕಾಗಿದ್ದ 5,000 ಕೋಟಿ ರು. ನೀಡಿಲ್ಲ. ಇದೊಂದು ದೊಡ್ಡ ಹಗರಣ. ಈ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿಗಳು ಸೋಮವಾರ ಸಚಿವರೊಂದಿಗೆ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ್ದರು. ಸೋಮವಾರ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಸಾಧ್ಯವಾಗಲಿಲ್ಲ. ಇಂದಾದರೂ ಉತ್ತರ ಕೊಡಿಸಿ ಎಂದು ಆಗ್ರಹಿಸಿದರು.

ಈ ವೇಳೆ ಸ್ಪೀಕರ್‌ ಯು.ಟಿ.ಖಾದರ್‌, ಸಚಿವರು ಕಲಾಪದಲ್ಲಿ ಹಾಜರಾಗಿಲ್ಲ. ಅವರು ವಿಧಾನಸೌಧಕ್ಕೆ ಬಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಬಂದಿದ್ದರೆ ಉತ್ತರ ಕೊಡಿಸುವುದಾಗಿ ಹೇಳಿದರು.

ಇದಕ್ಕೆ ಅಶೋಕ್‌, ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ಕೊಡಲೇಬೇಕು. ಇಲ್ಲದಿದ್ದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಗೃಹಲಕ್ಷ್ಮಿ ಯೋಜನೆಯ ಹಗರಣದ ಬಗ್ಗೆ ದಾಖಲೆ ನೀಡಿದ್ದೇವೆ. ಸದನದಲ್ಲಿ ಸಚಿವರೇ ಸುಳ್ಳು ಉತ್ತರ ನೀಡಿ ವಂಚಿಸಿದ್ದಾರೆ. ಮಂತ್ರಿಗಳ ಮೇಲೆ ಕ್ರಮ ಆಗಬೇಕು. ಗೃಹಲಕ್ಷ್ಮಿ ವಿಚಾರವಾಗಿ ಹೋರಾಟ ಮಾಡುತ್ತೇವೆ ಎಂದರು.

ಯಾವ ಲಕ್ಷ್ಮೀ ಮನೆಗೆ ಹಣ ಹೋಯಿತು?-ಛಲವಾದಿ:

ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಬರೀ 5,000 ಕೋಟಿ ರು. ಹಗರಣ ಅಲ್ಲ. ಬಹಳಷ್ಟು ಮಹಿಳೆಯರ ಖಾತೆಗೆ ಮೊದಲಿನಿಂದಲೂ ಹಣ ಬಂದಿಲ್ಲ. ಈ ಗೃಹಲಕ್ಷ್ಮಿ ಹಣ ಗೃಹಲಕ್ಷ್ಮಿಗೆ ಹೋಯಿತೇ ಅಥವಾ ಬೇರೆ ಲಕ್ಷ್ಮೀ ಮನೆಗೆ ಹೋಗಿದೆಯೇ ಹೇಳಬೇಕು. ಈ ಬಗ್ಗೆ ಇಂದಿನಿಂದಲೇ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಹಣ ಗೃಹಲಕ್ಷ್ಮಿಗೆ ಹೋಯ್ತಾ

ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ಹಣ ಎಲ್ಲಿ ಹೋಯಿತು ಎಂಬುದನ್ನು ಹೇಳಬೇಕು. ಹಿಂದೆ ಯುಪಿಎ ಸರ್ಕಾರದಲ್ಲಿ 72,000 ಕೋಟಿ ರು. ಸಾಲ ಮನ್ನಾ ಮಾಡಿದಾಗ 12,000 ಕೋಟಿ ರು. ಬೋಗಸ್‌ ಖಾತೆಗಳಿಗೆ ಹೋಗಿತ್ತು. ಈ ಪ್ರಕರಣದಲ್ಲೂ ಏನು ಹಗರಣ ಆಗಿದೆ ಎಂಬುದನ್ನು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.