ಕಾಫಿನಾಡಲ್ಲಿ ಭರ್ಜರಿ ಮಳೆ, ತುಂಗಾ-ಭದ್ರಾ- ಹೇಮಾವತಿ ನದಿಗಳಿಗೆ ಜೀವಕಳೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಿನದಿಂದ ದಿನಕ್ಕೆ ಮಳೆರಾಯ ಚರುಕು ಪಡೆದುಕೊಳ್ಳುತ್ತಿದ್ದು ತುಂಗಾ-ಭದ್ರಾ-ಹೇಮಾವತಿ ನದಿಗಳ ಒಡಲು ಕ್ರಮೇಣ ಭರ್ತಿಯಾಗುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.05): ಕರುನಾಡಿಗೆ ನೀರುಣಿಸುತ್ತಿದ್ದ ಸಪ್ತ ನದಿಗಳ ನಾಡು ಕಾಫಿನಾಡಲ್ಲಿ ಮಳೆ ಬಾರದ ಕಾರಣ ನದಿಗಳ ಒಡಲು ಬರಿದಾಗಿತ್ತು. ಮಲೆನಾಡು ಸೇರಿದಂತೆ ಇಡೀ ರಾಜ್ಯವೇ ಮಳೆಗಾಗಿ ಮುಗಿಲಿನತ್ತ ಮುಖ ಮಾಡಿತ್ತು. ಆದರೆ, ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಮಳೆರಾಯ ಚರುಕು ಪಡೆದುಕೊಳ್ಳುತ್ತಿದ್ದು ನದಿಗಳ ಒಡಲು ಕ್ರಮೇಣ ಭರ್ತಿಯಾಗುತ್ತಿದೆ. ಕಾಫಿನಾಡ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ರಾಜ್ಯದ ಉದ್ದಗಲಕ್ಕೂ ಹರಿಯೋ ತುಂಗಾ-ಭದ್ರಾ-ಹೇಮಾವತಿ ನದಿ ಒಡಲಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಹೆಚ್ಚುತ್ತಿದೆ.
ಮಲೆನಾಡ ಭಾಗದಲ್ಲಿ ಮಳೆಯ ಅಬ್ಬರ: ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆಡುತ್ತಿದ್ದ. ಆದ್ರೆ, ಮಳೆ ತವರು ಮಲೆನಾಡಲ್ಲಿ ನಿನ್ನೆಯಿಂದ ಮಲೆನಾಡಲ್ಲಿ ಮಳೆರಾಯ ಚುರುಕು ಪಡೆದುಕೊಂಡಿದ್ದು ನಾಡಿಗೆ ನೀರಿನ ಸೌಲಭ್ಯ ಕಲ್ಪಿಸುವ ತುಂಗಾಭದ್ರ ಹಾಗೂ ಹೇಮಾವತಿ ಒಡಲಲ್ಲಿ ನಾಲ್ಕೈದು ಅಡಿಯಷ್ಟು ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಸನದ ಗೊರೂರು ಡ್ಯಾಂ ತಲುಪಿ, ಅಲ್ಲಿಂದ ಕೆ.ಆರ್.ಎಸ್. ಮೂಲಕ ಬೆಂಗಳೂರು ತಲುಪುವ ಹೇಮಾವತಿ ನದಿಯಲ್ಲಿ ಮೂರು ಅಡಿಯಷ್ಟು ನೀರಿನ ಪ್ರಮಾಣ ಹೆಚ್ಚಾಗಿದೆ.
Kodagu Rains: ಕೊಡಗಿನಲ್ಲಿ ತೀವ್ರಗೊಂಡ ಮಳೆ, ಮರ ಬಿದ್ದು ಬಸ್ ಜಖಂ, ಆರೆಂಜ್ ಅಲರ್ಟ್ ಘೋಷಣೆ
ಕಲ್ಯಾಣ ಕರ್ನಾಟಕದ ಟಿಬಿಡ್ಯಾಂಗೂ ನೀರು ಹೆಚ್ಚಳ: ಇನ್ನು ಬಳ್ಳಾರಿಯ ಹೊಸಪೇಟೆ ತಲುಪುವ ತುಂಗಾ-ಭದ್ರಾ ನದಿಯ ಒಳಹರಿವಿನಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳಸ ತಾಲೂಕಿನ ಕುದುರೆಮುಖ ಘಟ್ಟ ಪ್ರದೇಶ, ಶೃಂಗೇರಿ ತಾಲೂಕಿನ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿನ ಧಾರಾಕಾರ ಮಳೆಗೆ ತುಂಗಾ-ಭದ್ರಾ ನದಿಗೆ ಜೀವಕಳೆ ಬಂದಿದೆ..
ಮೂಡಿಗೆರೆಯಲ್ಲಿ ಧರಗುರುಳಿದ ವಿದ್ಯುತ್ ಕಂಬಗಳು: ನದಿ ಒಡಲು ತುಂಬುತ್ತಿರೋದು ಒಂದೆಡೆಯಾದ್ರೆ ಗಾಳಿ-ಮಳೆಯಿಂದಾಗ್ತಿರೋ ಅನಾಹುತಗಳಿಗೇನು ಕೊರತೆ ಇಲ್ಲ. ಕಳಸ ತಾಲೂಕಿನ ಹೊರನಾಡಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರೀ ಅನಾಹುತ ಒಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಕಳಸದಲ್ಲಿ ಬೀಸುತ್ತಿರೋ ರಣಗಾಳಿಗೆ ಹಿರೇಬೈಲ್ ಸಮೀಪದ ಇಡಕಣಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ಮನೆಯೊಡತಿ ನಾಗರತ್ನಮ್ಮ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಮನೆಯಲ್ಲಿದ್ದ ದಿನಸಿ ಪದಾರ್ಥ ಹಾಗೂ ಗೃಹಪಯೋಗಿ ವಸ್ತುಗಳು ನಾಶವಾಗಿವೆ. ಮೂಡಿಗೆರೆಯಲ್ಲಿ ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು, ಮೆಸ್ಕಾಂ ಸಿಬ್ಬಂದಿಗಳು ಸುರಿಯೋ ಮಳೆಯಲ್ಲೇ ವಿದ್ಯುತ್ ಕಂಬಗಳನ್ನ ದುರಸ್ಥಿ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿಯೂ ಒಣಗಿನಿಂತ ಪಶ್ಚಿಮ ಘಟ್ಟದ ಕಾಡು, ನದಿಗಳು: ಇದು ಅರಣ್ಯನಾಶದ ಮರುಹೊಡೆತ
ಮಳೆ ನಿಧಾನವಾಗಿ ಸುರಿದರೆ ಭೂಮಿ ನೆನೆಯುತ್ತದೆ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ತರುವೆ, ಬಣಕಲ್, ಬಾಳೂರು, ದೇವರಮನೆ, ಗುತ್ತಿ, ಕುಂದೂರು, ಮತ್ತಿಕಟ್ಟೆ, ಜಾಣಿಗೆ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಒಟ್ಟಾರೆ, ಮಲೆನಾಡಲ್ಲಿ ಧಾರಾಕಾರ, ಭಾರೀ ಮಳೆಯಾಗದಿದ್ದರು ಸುರಿಯುತ್ತಿರೋ ಸಾಧಾರಣ ಮಳೆಯಿಂದ ನದಿಗಳ ಒಡಲು ತುಂಬುತ್ತಿದೆ. ಆದರೆ, ಮಲೆನಾಡಿಗರು ಧಾರಾಕಾರ ಸುರಿದ್ರೆ ನೀರು ಹರಿದು ಹೋಗುತ್ತೆ. ಭೂಮಿ ನೀರು ಕುಡಿಯಬೇಕು ಅಂದ್ರೆ ಮಳೆ ಹೀಗೆ ಬರಬೇಕು. ಹೀಗೆ ಬರಲಿ ಎಂದು ಬಯಸುತ್ತಿದ್ದಾರೆ. ನದಿ, ಕೆರೆ-ಕಟ್ಟೆಗಳು ತುಂಬಬೇಕು ಅಂದ್ರೆ ಮಳೆ ಜೋರಾಗಿ ಬರಬೇಕು. ಭೂಮಿ ನೀರು ಕುಡಿಯಬೇಕು ಅಂದ್ರೆ ನಿಧಾನವೇ ಬರಬೇಕು. ಮಳೆರಾಯ ನಮ್ಮ ಮಾತನ್ನ ಕೇಳುತ್ತಾನಾ. ಮುಂದೆ ಅವನ ಅಬ್ಬರ ಹೇಗಿರುತ್ತೋ ಕಾದುನೋಡ್ಬೇಕು.