Asianet Suvarna News Asianet Suvarna News

ಬೆಂಗಳೂರು: ವರುಣನ ಆರ್ಭಟಕ್ಕೆ 20 ಬಡಾವಣೆ ಮುಳುಗಡೆ, ಇನ್ನೂ ಎರಡು ದಿನ ಭಾರೀ ಮಳೆ

2 ದಿನದ ಮಳೆಗೆ ಬೆಂಗಳೂರು ನಗರ ತತ್ತರ| 350ಕ್ಕೂ ಹೆಚ್ಚು ಮನೆಗಳಿಗೆ ನೀರು| ಹತ್ತಾರು ಅಪಾರ್ಟ್‌ಮೆಂಟ್‌ ಸೆಲ್ಲರ್‌ಗಳಿಗೆ ನೀರು| ಮನೆಗೆ ನೀರು ನುಗ್ಗಿದ್ದಕ್ಕೆ ರಸ್ತೆ ಬಂದ್‌ ಮಾಡಿ ಜನರಿಂದ ಪ್ರತಿಭಟನೆ| ನೀರಿನಲ್ಲಿ ಮುಳುಗಿದ 50ಕ್ಕೂ ಹೆಚ್ಚು ವಾಹನಗಳು| 

Heavy Rain in Last Two Days in Bengaluru
Author
Bengaluru, First Published Sep 10, 2020, 7:11 AM IST | Last Updated Sep 10, 2020, 7:13 AM IST

ಬೆಂಗಳೂರು(ಸೆ.10): ನಗರದಲ್ಲಿ ಮಂಗಳವಾರ ಮತ್ತು ಬುಧವಾರ ರಾತ್ರಿ ಅಬ್ಬರಿಸಿದ ಭಾರೀ ಮಳೆಗೆ ನಗರದ 20ಕ್ಕೂ ಹೆಚ್ಚು ಬಡಾವಣೆಗಳು ತತ್ತರಿಸಿದ್ದು, ತಗ್ಗುಪ್ರದೇಶದ 350ಕ್ಕೂ ಹೆಚ್ಚು ಮನೆಗಳು ಹಾಗೂ ಹತ್ತಾರು ಅಪಾರ್ಟ್‌ಮೆಂಟ್‌ಗಳ ಸೆಲ್ಲಾರ್‌ಗಳಿಗೆ ನೀರು ತುಂಬಿ ಅಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇದರ ನಡುವೆ ಇನ್ನೂ ಎರಡು ದಿನ ನಗರದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮಳೆಯಿಂದ ವಿವಿಧ ರಸ್ತೆಗಳಲ್ಲಿ ಹತ್ತಾರು ಮರಗಳು ಧರೆಗುರುಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ, ಪ್ರಮುಖ ಅಂಡರ್‌ಪಾಸ್‌ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಮಂಗಳವಾರ ರಾತ್ರಿ ಇಡೀ ಅಡ್ಡಿಯುಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ, ತುಮಕೂರು ರಸ್ತೆಯ ನೆಲಗದರನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಆಕ್ರೋಶಗೊಂಡ ಸಂತ್ರಸ್ತರು ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನು ಇಟ್ಟು ಸ್ಥಳೀಯ ಶಾಸಕರು ಮತ್ತು ಕಾರ್ಪೊರೇಟರ್‌ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಭಾರೀ ಮಳೆಯಾದರೆ ರಾಜಕಾಲುವೆಯ ನೀರು ಮನೆಗಳಿಗೆ ನುಗುತ್ತಿದ್ದು ಎಷ್ಟೇ ಮನವಿ ಮಾಡಿದರೂ ಬಿಬಿಎಂಪಿ ರಾಜಕಾಲುವೆ ಗೋಡೆ ಎತ್ತರಿಸದೆ ನಿರ್ಲಕ್ಷಿಸಿದೆ ಎಂದು ಕಿಡಿ ಕಾರಿದರು.

350 ಮನೆಗಳಿಗೆ ನೀರು:

ಎರಡು ದಿನಗಳ ಭಾರೀ ಮಳೆಯಲ್ಲಿ ಮಂಗಳವಾರ ಇಡೀ ರಾತ್ರಿ ಸುರಿದ ಮಳೆಯಿಂದಾದ ಅನಾಹುತವೇ ಹೆಚ್ಚು. ಅಂದು ರಾತ್ರಿ ನಗರದಲ್ಲಿ ಸರಾಸರಿ 57 ಮಿ.ಮೀ ಮಳೆಯಾಗಿದೆ. ಕುಶಾಲನಗರ ಮತ್ತು ಮನೋರಾಯನಪಾಳ್ಯದಲ್ಲಿ ಅತಿ ಹೆಚ್ಚು 136 ಮಿ.ಮೀ ಮಳೆಯಾಗಿದೆ. ಇದರ ಪರಿಣಾಮ ರಾಧಾ ಕೃಷ್ಣ ದೇವಸ್ಥಾನ ವಾರ್ಡ್‌, ಮನೋರಾಯನಪಾಳ್ಯ, ಹೆಣ್ಣೂರು, ಹೊರಮಾವು, ಸಹಕಾರನಗರ, ಕೋರಮಂಗಲ, ದ್ವಾರಕಾನಗರ, ಎಚ್‌ಎಸ್‌ಆರ್‌ ಲೇಔಟ್‌, ವಡ್ಡರಪಾಳ್ಯ, ಗರುಡಾಚಾರಪಾಳ್ಯ, ಕಾವೇರಿನಗರ, ಟಿ.ಸಿ.ಪಾಳ್ಯ, ರಾಮಮೂರ್ತಿ ನಗರ, ಸಾಯಿಬಾಬಾ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ದಿನ್ನೂರು, ಡಾಲರ್ಸ್‌ ಕಾಲೋನಿ, ರಾಜರಾಜೇಶ್ವರಿ ನಗರ, ಮಹದೇವಪುರ, ಯಲಹಂಕ, ದಾಸರಹಳ್ಳಿ, ನೆಲಗದರನಹಳ್ಳಿ ಸೇರಿದಂತೆ ಪೂರ್ವ ಹಾಗೂ ಪಶ್ಚಿಮ ವಲಯದ ತಗ್ಗು ಪ್ರದೇಶಗಳ ಬಡಾವಣೆಗಳು ಅಕ್ಷರಶಃ ದ್ವೀಪಗಳಾಗಿದ್ದವು. ಇಲ್ಲಿನ 300ಕ್ಕೂ ಹೆಚ್ಚು ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಲ್ಲಿನ ಎಲ್ಲ ವಸ್ತುಗಳೂ ನೀರು ಪಾಲಾಗಿ ನಷ್ಟಅನುಭವಿಸಿದ್ದಾರೆ.

ಮಹಾಮಳೆಗೆ ಬೆಚ್ಚಿಬಿದ್ದ ಬೆಂಗಳೂರಿಗರು!

ರಾತ್ರಿ ಇಡೀ ಪರಿತಪಿಸಿರುವ ಇಲ್ಲಿನ ಜನರು ಬೆಳಗಾದರೂ ಮನೆಳಿಗೆ ತುಂಬಿಕೊಂಡಿದ್ದ ನೀರನ್ನು ಹೊರ ಹಾಕುವುದರಲ್ಲಿ ಹೈರಾಣಾಗಿದ್ದರು. ಡಾಲರ್ಸ್‌ ಕಾಲೋನಿ ಸೇರಿದಂತೆ ವಿವಿಧ ಅಪಾರ್ಟ್‌ಮೆಂಟ್‌ಗಳ ಸೆಲ್ಲರ್‌ಗಳು ನೀರಿನಿಂದ ತುಂಬಿ ಹೋಗಿದ್ದು ಅಪಾರ್ಡ್‌ಮೆಂಟ್‌ಗಳ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮೋಟರ್‌ಗಳನ್ನು ಅಳವಡಿಸಿ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆಯಿಂದಾಗಿ ಅನೇಕ ಕಡೆ ರಾತ್ರಿ ಇಡೀ ವಿದ್ಯುತ್‌ ವ್ಯತ್ಯಯ ಉಂಟಾಗಿ ಜನರು ಕತ್ತಲಲ್ಲೇ ರಾತ್ರಿ ಕಳೆಯಬೇಕಾಯಿತು. ಇದೇ ವೇಳೆ ಮಲ್ಲೇಶ್ವರ, ಪೂರ್ವ ವಲಯ ಹಾಗೂ ಬಸವನಗುಡಿ ಭಾಗದಲ್ಲಿ ಐದಕ್ಕೂ ಹೆಚ್ಚು ಮರ ಮತ್ತು ಮರದ ಕೊಂಬೆ ಧರೆಗುರುಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಡೀ ರಾತ್ರಿ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡರೂ ಬಿಬಿಎಂಪಿ ಅಧಿಕಾರಿಗಳಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಹೋಗಿ ಸಂತ್ರಸ್ತರ ನೆರವಿಗೆ ಧಾವಿಸದೇ ಇರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಡೀ ರಾತ್ರಿ ನಿದ್ದೆ ಮಾಡದೇ ಜಾಗರಣೆ ಮಾಡಿದ ಸ್ಥಳೀಯರು ಬೆಳಗ್ಗೆ ಊಟ, ತಿಂಡಿಗಾಗಿ ಪರದಾಡಬೇಕಾದ ಪರಿಸ್ಥಿತಿ ಸಹ ನಿರ್ಮಾಣಗೊಂಡಿತ್ತು.

ಬುಧವಾರ ಎಲ್ಲೆಲ್ಲಿ ಅನಾಹುತ:

ಇನ್ನು ಬುಧವಾರ ರಾತ್ರಿ 10 ಗಂಟೆ ವರೆಗೆ ಸರಾಸರಿ 20 ಮಿ.ಮೀ ಮಳೆಯಾಗಿದ್ದು ಅಗ್ರಹಾರ ದಾಸರಹಳ್ಳಿಯಲ್ಲಿ ಅತಿ ಹೆಚ್ಚು 109 ಮಿ.ಮೀ. ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿಯ ವೈಜ್ಞಾನಿಕ ಅಧಿಕಾರಿ ಡಾ
ಶುಭಾ ಅವಿನಾಶ್‌ ಮಾಹಿತಿ ನೀಡಿದ್ದಾರೆ. ಇದರ ಪರಿಣಾಮ ಆರ್‌.ಆರ್‌.ನಗರದ ವಲಯದಲ್ಲಿ ಹೆಚ್ಚು ಹಾನಿ ಉಂಟಾಗಿದ್ದು, ಐಡಿಯಲ್‌ ಹೋಮ್ಸ್‌ ಬಡಾವಣೆ, ಕೆಂಚೇನಹಳ್ಳಿ, ಪ್ರಮೋದ್‌ ಲೇಔಟ್‌, ಜನಪ್ರಿಯಾ ಅಬೋರ್ಡ್‌, ಮೈಲಸಂದ್ರದ ತಗ್ಗು ಪ್ರದೇಶ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದೆ. ಇನ್ನು ಲೊಟ್ಟೆಗೊಲ್ಲಹಳ್ಳಿ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದರಿಂದ ಕಾರುಗಳು ಮುಳುಗಡೆಯಾಗಿವೆ. ಕೊಟ್ಟಿಗೇಹಳ್ಳಿ ಗೇಟ್‌ನಲ್ಲಿ ಕಾರೊಂದು ನೀರಿನಲ್ಲಿ ಸಿಲುಕ್ಕಿಕೊಂಡಿತ್ತು. ಇನ್ನು ಓಕಳಿಪುರ ಜಂಕ್ಷನ್‌ನ ಅಂಡರ್‌ ಪಾಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಬೇಕಾಯಿತು. ಇನ್ನು ಬಸವೇಶ್ವರ ನಗರದ ಭೀಮಾ ಜ್ಯೋತಿನಗರದಲ್ಲಿ ಮರ ಧರೆಗುರುಳಿರುವುದಾಗಿ ಬಿಬಿಎಂಪಿ ಕಂಟ್ರೋಲ್‌ ರೂಂಗಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ರಸ್ತೆಯಲ್ಲಿ 4 ಅಡಿ ನೀರು!

ಹೆಣ್ಣೂರಿನ ಸಾಯಿಬಾಬಾ ಲೇಔಟ್‌ನಲ್ಲಿ ರಸ್ತೆ ಹಾಗೂ ಮೋರಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಸುಮಾರು ನಾಲ್ಕು ಅಡಿಗಳಷ್ಟುನೀರು ರಸ್ತೆಯಲ್ಲಿ ನಿಂತ ಪರಿಣಾಮ ಸಾಯಿ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಬಡಾವಣೆಯ ಅನೇಕ ಮನೆ, ಅಂಗಡಿ ಮಳಿಗೆ ಹಾಗೂ ನೆಲ ಮಹಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಈ ಭಾಗದಲ್ಲಿ 50ಕ್ಕೂ ಹೆಚ್ಚು ಕಾರು, ಬೈಕ್‌ ಸೇರಿದಂತೆ ಇನ್ನಿತರ ವಾಹನಗಳ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿವೆ. ಇನ್ನು ಮನೆಯಲ್ಲಿರುವ ಟಿವಿ, ವಾಷಿಂಗ್‌ ಮೆಷಿನ್‌ ಸೋಫಾ ಸೆಟ್‌, ದಿನಸಿ, ಹಾಸಿಗೆ ಹಾಗೂ ದಿನ ಬಳಕೆ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕಳೆದ ಹತ್ತು ವರ್ಷದ ಹಿಂದೆ ಸಾಯಿಬಾಬ ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಬಡಾವಣೆಯ ನೀರು ಹರಿದು ಹೋಗುವ ಜಾಗದಲ್ಲಿ ಬಿಡಿಎ ಬಡಾವಣೆ ನಿರ್ಮಿಸಿದೆ. ಅದಾದ ಬಳಿಕ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೆಬ್ಬಾಳ ಫ್ಲೈಓವರ್‌ ಕೆಳಗೆ ನೀರು: ವಾಹನ ಸಂಚಾರ ಸ್ಥಗಿತ

ಮಳೆಯಿಂದ ಹೆಬ್ಬಾಳದ ಮೇಲ್ಸೇತುವೆ ಕೆಳ ಭಾಗದಲ್ಲಿ ನೀರು ತುಂಬಿಕೊಂಡು ಮಂಗಳವಾರ ರಾತ್ರಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕೆ.ಆರ್‌. ಪುರದ ಪೈ ಲೇಔಟ್‌ ಹಾಗೂ ಟಿನ್‌ ಫ್ಯಾಕ್ಟರಿ ಜಂಕ್ಷನ್‌ ಬಳಿ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತು ದ್ವಿಚಕ್ರ ವಾಹನ ಸವಾರರು ಆಟೋ, ಕಾರುಗಳ ಚಾಲಕರು ಪರದಾಡಿದರು. ಕಸ್ತೂರಿ ನಗರದ ಕೆಳಸೇತುವೆ ಸೇರಿದಂತೆ ಇನ್ನಿತರ ಕಡೆಗಳಲ್ಲೂ ಕೆಳಸೇತುವೆಗಳಲ್ಲಿ ಎರಡು ಅಡಿಗಿಂತಲೂ ಹೆಚ್ಚು ನೀರು ನಿಂತು ಬುಧವಾರ ಮಧ್ಯಾಹ್ನದವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಕೊಡಿಗೆಹಳ್ಳಿ ರೈಲ್ವೆ ಅಂಡರ್‌ ಪಾಸ್‌ ಹಾಗೂ ಶಿವಾನಂದ ವೃತ್ತದ ಬಳಿಕ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಕಾರು ಸಿಲುಕಿಗೊಂಡಿತ್ತು. ನೀರಿನ ಹರಿವು ಕಡಿಮೆಯಾದ ಬಳಿಕ ಕಾರು ಹೊರ ತೆಗೆಯಲಾಯಿತು.

ಪ್ರತಿ ವರ್ಷ ನೀರು ನುಗ್ಗುತ್ತೆ

ಡಾಲರ್ಸ್‌ ಕಾಲೋನಿಯಲ್ಲಿ ಅಪಾರ್ಟ್‌ಮೆಂಟ್‌ಗೆ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಕಳೆದ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಇದ್ದಾಗಲೂ ಮನವಿ ಮಾಡಲಾಗಿದೆ. ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೆ, ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ. ಪಕ್ಕದಲ್ಲಿ ರಾಜಕಾಲುವೆ ಇದೆ. ರಾಜಕಾಲುವೆ ಕಸ ತೆಗೆದಿಲ್ಲ. ಹೂಳು ತುಂಬಿಕೊಂಡಿದೆ. ತಡೆಗೋಡೆ ಎತ್ತರ ಮಾಡಿಲ್ಲ. ಹೀಗಾಗಿ ನೀರು ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತಿದೆ. ಅಪಾರ್ಟ್‌ಮೆಂಟ್‌ ಬೆಸ್‌ ಮೆಂಟ್‌ನಲ್ಲಿ ನಿಲ್ಲಿಸಲಾಗಿರುವ ಸುಮಾರು 60ಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ರಾಘವೇಂದ್ರ ಶೆಟ್ಟಿಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು, ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಶಾಸಕರು, ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ತೆಗೆದುಕೊಂಡಿಲ್ಲ. ಪಕ್ಕದಲ್ಲಿ ರಾಜಕಾಲುವೆ ಇದೆ. ಮಳೆ ಬಂದಾಗ ಇದೇ ಅವಸ್ಥೆ ಆಗುತ್ತದೆ. ಕಳೆದ 5-6 ವರ್ಷಗಳಿಂದ ಇದೇ ಕಷ್ಟಅನುಭವಿಸುತ್ತಿದ್ದೇವೆ. ಕೂಡಲೇ ರಾಜಕಾಲುವೆ ತೆರವು ಮಾಡುವಂತೆ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಅಧಿಕಾರಿಗಳು ಬರುವವರೆಗೆ ನಾವು ರಸ್ತೆಯನ್ನು ಬಂದ್‌ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನ ಇಟ್ಟು ತುಮಕೂರು ರಸ್ತೆಯ 8ನೇ ಮೈಲಿ ನೆಲಗೆದರನಹಳ್ಳಿ ಮುಖ್ಯ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios