ಬೆಂಗಳೂರು(ಜೂ.01): ರಾಜ್ಯದಲ್ಲಿ ಮುಂದಿನ 48 ಗಂಟೆ ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುರಿತ ಉಂಟಾಗಿದ್ದು, ಚಂಡಮಾರುತವಾಗುವ ಎಲ್ಲ ಸಾಧ್ಯತೆ ಇದೆ. ಪರಿಣಾಮ ರಾಜ್ಯದಲ್ಲಿ ಮುಂದಿನ ಎರಡು ದಿನ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗಲಿದೆ ಎಂದಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆರು ಜಿಲ್ಲೆಗೆ ಆರೇಂಜ್‌ ಅಲರ್ಟ್‌:

ಮುಂದಿನ 48 ಗಂಟೆಯಲ್ಲಿ ಕರಾವಳಿಯ ಉಡುಪಿ, ಉತ್ತರ ಕನ್ನಡ, ಮಲೆನಾಡು ಭಾಗದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ 115 ಮಿ.ಮೀ.ನಿಂದ 204 ಮಿ.ಮೀ.ವರೆಗೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಆರು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಇನ್ನು ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ ಹಾಗೂ ಹಾಸನ ಜಿಲ್ಲೆಗಳಲ್ಲಿ 65 ಮಿ.ಮೀ ರಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ನಾಲ್ಕು ಜಿಲ್ಲೆಗಳಿಗೆ ‘ಎಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಇನ್ನು ಕರಾವಳಿ ತೀರದಲ್ಲಿ 65 ಕಿ.ಮೀ ನಿಂದ 85 ಕಿ.ಮೀ ವರೆಗೆ ಭಾರೀ ಗಾಳಿ ಬೀಸದಲಿದೆ. ಹಾಗಾಗಿ, ಕಡಲ ತೀರದ ಜಿಲ್ಲೆಗಳ ಜನರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಳೆಗಾಲದಲ್ಲಿ ಕೊರೋನಾ ವೈರಸ್ ಶಕ್ತಿ ಹೆಚ್ಚಾಗುತ್ತಾ? ಬೆಚ್ಚಿ ಬೀಳಿಸುತ್ತಿದೆ ಅಧ್ಯಯನ ವರದಿ!

ಜೂ.3 ರಿಂದ ಮಳೆ ತಗ್ಗಲಿದೆ:

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುರಿತ ಚಂಡಮಾರುತವಾಗಿ ಪರಿವರ್ತನೆ ಆಗುವ ವೇಳೆ ಉತ್ತರ ಭಾಗದಲ್ಲಿ ಚಲಿಸಲಿದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ರಾಜ್ಯದಲ್ಲಿ ಜೂ. 1 ಮತ್ತು 2 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಜೂ 3 ರಿಂದ ನಾಲ್ಕೈದು ದಿನ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಜೂನ್‌ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿರುವ ಅಂಕಿ ಅಂಶ ಪ್ರಕಾರ ಶನಿವಾರ ಉಡುಪಿಯ ಕುಂದಾಪುರದಲ್ಲಿ ಅತಿ ಹೆಚ್ಚು 4 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಉತ್ತರ ಕನ್ನಡದ ಹೊನ್ನಾವರ ಹಾಗೂ ಬೆಂಗಳೂರಿನ ಹೆಸರಘಟ್ಟದಲ್ಲಿ ತಲಾ 3, ಉಡುಪಿ ಕೋಟಾ, ಉತ್ತರ ಕನ್ನಡದ ಗೋಕರ್ಣ, ಅಂಕೋಲ, ಬಾಗಲಕೋಟೆಯ ಬಾದಾಮಿ, ಶೃಂಗೇರಿ, ಗುಬ್ಬಿಯಲ್ಲಿ ತಲಾ 2 ಸೆಂ.ಮೀ ಮಳೆಯಾದ ವರದಿಯಾಗಿದೆ. ಇನ್ನು ಕಲಬುರಗಿಯಲ್ಲಿ ಅತಿ ಹೆಚ್ಚು 40.1 ಡಿಗ್ರಿ ಸೆಲ್ಸಿಯಸ್‌ ನಷ್ಟುಗರಿಷ್ಠ ಉಷ್ಣಾಂಶ ದಾಖಲಾಗಿದೆ.