ಮಳೆ: ರಾಜ್ಯದಲ್ಲಿ ಆರೇಂಜ್, ಯೆಲ್ಲೋ ಅಲರ್ಟ್| ಉಡುಪಿ. ಉ.ಕ., ದ.ಕ.ದಲ್ಲಿ ಆರೇಂಜ್ ಅಲರ್ಟ್| 19 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್| ಮತ್ತೊಂದು ವಾಯುಭಾರ ಕುಸಿತ ಸಾಧ್ಯತೆ
ಬೆಂಗಳೂರು(ಜೂ.17): ಮುಂದಿನ 24 ಗಂಟೆಯಲ್ಲಿ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 3 ಜಿಲ್ಲೆಗಳಲ್ಲಿ ‘ಆರೇಂಜ್ ಅಲರ್ಟ್’ ಹಾಗೂ 19 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಸಾರಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಮತ್ತೆ ಜೂ.19ರ ವೇಳೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ವಾತಾವರಣದಲ್ಲಿ ತೇವಾಂಶದಿಂದ ಕೂಡಿದ ಗಾಳಿ ಚಲನೆ ಆಗುತ್ತಿರುವ ಪರಿಣಾಮವಾಗಿ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಜಿಲ್ಲೆಯಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಗುಂಬೆ ಘಾಟಿಯಲ್ಲಿ ಭಾರೀ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧ
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಬುಧವಾರವೂ ಮಳೆ ಮುಂದುವರೆಯಲಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 115 ರಿಂದ 204 ಮಿ. ಮೀ.ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೇಂಜ್ ಅಲರ್ಟ್‘ ಎಚ್ಚರಿಕೆ ನೀಡಲಾಗಿದೆ.
ಉಳಿದಂತೆ ಉತ್ತರ ಒಳನಾಡು, ಮಲೆನಾಡು ಭಾಗದ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಒಟ್ಟು 19 ಜಿಲ್ಲೆಗಳಲ್ಲಿ 65 ರಿಂದ 115 ಮಿ.ಮೀ ಮಳೆಯಾಗುವ ಸಾಧ್ಯತೆ ಇರುವುದು ‘ಎಲ್ಲೋ ಅಲರ್ಟ್‘ ಎಚ್ಚರಿಕೆ ನೀಡಲಾಗಿದೆ.
ಭಾರಿ ಮಳೆ ಸಾಧ್ಯತೆ: ಇಂದಿನಿಂದ 5 ದಿನ ಯೆಲ್ಲೋ ಅಲರ್ಟ್
ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಕಳೆದ 24 ಗಂಟೆಯಲ್ಲಿ ಕೊಲ್ಲೂರು ಮತ್ತು ಗೋಕರ್ಣದಲ್ಲಿ ಅತಿ ಹೆಚ್ಚು 10 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 8, ಉತ್ತರ ಕನ್ನಡದ ಶಿರಾಲಿಯಲ್ಲಿ 7, ಕಾರ್ಕಳ, ಹೊಸನಗರದಲ್ಲಿ ತಲಾ 6 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
