Asianet Suvarna News Asianet Suvarna News

ರಾಜ್ಯಾದ್ಯಂತ ಭರ್ಜರಿ ಮಳೆ: ರೈತರಿಗೆ ಸಿಹಿ-ಕಹಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕೊಂದರಲ್ಲೇ ಸೋಮವಾರ ರಾತ್ರಿ ಸುರಿದ ಮಳೆಗೆ 200 ಎಕ್ರೆಗೂ ಅಧಿಕ ಪ್ರದೇಶದಲ್ಲಿ, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 60ಕ್ಕೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ 300 ಎಕರೆಗೂ ಹೆಚ್ಚು ಭತ್ತದ ಬೆಳೆ ಸೇರಿ ಹತ್ತಿ, ತೊಗರಿ ಬೆಳೆ ನಷ್ಟವಾಗಿದೆ. ಇನ್ನು ರಾಯಚೂರು, ಉತ್ತರ ಕನ್ನಡದಲ್ಲೂ ಭತ್ತದ ಬೆಳೆಗೆ ಹಾನಿಯಾಗಿದೆ. 

Heavy Rain Some Parts of Karnataka grg
Author
First Published Nov 8, 2023, 5:26 AM IST

ಬೆಂಗಳೂರು(ನ.08):  ಮುಂಗಾರು ಕೈಕೊಟ್ಟು ರಾಜ್ಯಾದ್ಯಂತ ಬರದ ವಾತಾವರಣ ಸೃಷ್ಟಿಯಾಗಿರುವುದರ ನಡುವೆಯೇ ರಾಜ್ಯದ ಹಲವೆಡೆ ಮತ್ತೆ ಉತ್ತಮ ಮಳೆಯಾಗಿದೆ. ಬೆಂಗಳೂರು ಸೇರಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಮಳೆಯಾಗಿದ್ದು, ಚಿಕ್ಕಮಗಳೂರಿನಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.

ಭತ್ತ ಕಟಾವಿಗೆ ಬಂದಿರುವಾಗ ಈ ಹಿಂಗಾರು ಮಳೆಯಿಂದಾಗಿ ದಾವಣಗೆರೆ ಸೇರಿ ಕೆಲ ಜಿಲ್ಲೆಗಳಲ್ಲಿ 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದರೆ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದಲ್ಲಿ ನೀರಿಲ್ಲದೆ ಒಣಗುತ್ತಿದ್ದ ತೋಟಗಾರಿಕಾ ಬೆಳೆಗೆ ಕೊಂಚ ಜೀವ ಬಂದಂತಾಗಿದೆ.

ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಿಢೀರ್‌ ಮಳೆ: ಬರದಿಂದ ಕಂಗೆಟ್ಟ ರೈತ ಕೊಂಚ ನಿರಾಳ

ಬಿಸಿಲಿಂದ ಕಂಗೆಟ್ಟಿದ್ದ ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಕೊಪ್ಪಳ, ಕಲಬುರಗಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಮುಂದುವರಿದಿದ್ದು, ಕೋಲಾರ, ದಕ್ಷಿಣ ಕನ್ನಡದ ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಬೆಂಗಳೂರು, ಮಂಡ್ಯದಲ್ಲಂತೂ ಸುಮಾರು ಎರಡ್ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಮಂಡ್ಯದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ನೀರು ನುಗ್ಗಿ ಪ್ರಯಾಣಿಕರು ಪರದಾಡಿದರೆ, ಬೆಂಗಳೂರಿನಲ್ಲಿ ವಾಹನ ಸಂಚಾರರು ಸಮಸ್ಯೆ ಎದುರಿಸಬೇಕಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಚ್ಚೇರಿ ಕೋಡಿಹಳ್ಳಿಯಲ್ಲಿ ಸೋಮವಾರ ರಾತ್ರಿ ಮನೆ ಗೋಡೆ ಕುಸಿದು ಲಚ್ಚಾನಾಯ್ಕ (80) ಎಂಬವರು ಮೃತಪಟ್ಟಿದ್ದಾರೆ.

ಭತ್ತ ಬೆಳೆಗಾರ ತತ್ತರ: ಈಗಾಗಲೇ ಬರದಿಂದ ಕಂಗೆಟ್ಟಿದ್ದ ಭತ್ತ ಬೆಳೆಯುವ ಪ್ರದೇಶಗಳಾದ ರಾಜ್ಯದ ದಾವಣಗೆರೆ, ರಾಯಚೂರು, ಉತ್ತರ ಕನ್ನಡ, ಕೊಪ್ಪಳದ ರೈತರು ಈ ದಿಢೀರ್‌ ಮಳೆಯಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಮಳೆಯಿಂದಾಗಿ ಈ ಭಾಗದಲ್ಲಿ ಸುಮಾರು 500 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಯಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕೊಂದರಲ್ಲೇ ಸೋಮವಾರ ರಾತ್ರಿ ಸುರಿದ ಮಳೆಗೆ 200 ಎಕ್ರೆಗೂ ಅಧಿಕ ಪ್ರದೇಶದಲ್ಲಿ, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 60ಕ್ಕೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ 300 ಎಕರೆಗೂ ಹೆಚ್ಚು ಭತ್ತದ ಬೆಳೆ ಸೇರಿ ಹತ್ತಿ, ತೊಗರಿ ಬೆಳೆ ನಷ್ಟವಾಗಿದೆ. ಇನ್ನು ರಾಯಚೂರು, ಉತ್ತರ ಕನ್ನಡದಲ್ಲೂ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.

ಬೆಂಗಳೂರಲ್ಲಿ ಭಾರೀ ಮಳೆ; ಈ ಪ್ರದೇಶಗಳ ವಾಹನ ಚಾಲಕರಿಗೆ ಪೊಲೀಸರಿಂದ ಮಹತ್ವದ ಸಂಚಾರ ಸಲಹೆ

ಚಿಕ್ಕಬಳ್ಳಾಪುರದಲ್ಲಿ ಸಂತಸ: ಚಿಕ್ಕಬಳ್ಳಾಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಕ್ಕಲಮಡಗು ಜಲಾಶಯಕ್ಕೆ ಎರಡು ಅಡಿ ನೀರು ಹರಿದು ಬಂದಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ನೀರು ಪೂರೈಸುವ ಜಕ್ಕಲಮಡಗು ಜಲಾಶಯ ನೀರಿಲ್ಲದೆ ಸೊರಗಿತ್ತು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗೆಂಬ ಆತಂಕ ಕಾಡುತ್ತಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ನೀರಿನಮಟ್ಟ ಏರಿಕೆಯಾಗಿದೆ. ಗರಿಷ್ಠ 64 ಅಡಿಗಳವರೆಗೂ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದ ನೀರಿನಮಟ್ಟ ಸದ್ಯ 37 ಅಡಿಗೆ ಏರಿಕೆಯಾಗಿದೆ. ಇನ್ನು ತೋಟಗಾರಿಕೆ ಬೆಳೆ ಹೆಚ್ಚಾಗಿ ಬೆಳೆಯುವ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದ ರೈತರು ಹಿಂಗಾರು ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ.

ಇನ್ನೂ 3 ದಿನ ಮಳೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಮುಂದಿನ ಮೂರು ದಿನ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ‘ಕಳೆದ ಮೂರು ದಿನದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಜಿಲ್ಲೆ ಹಾಗೂ ಉತ್ತರ ಒಳನಾಡಿನ ಎರಡು ಜಿಲ್ಲೆಗಳಾದ ಗದಗ ಹಾಗೂ ಹಾವೇರಿಯಲ್ಲಿ ಭಾರೀ ಮಳೆಯಾಗಲಿರುವುದರಿಂದ ಈ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದೆ.

Follow Us:
Download App:
  • android
  • ios