ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ
* ರಾಜ್ಯದಲ್ಲಿ ಇನ್ನೂ ಕೆಲ ದಿನ ಮುಂದುವರಿಯಲಿದೆ ವರುಣನ ಆರ್ಭಟ
* ಆಗಸ್ಟ್ ಕೊನೆಯ ವಾರ ಉತ್ತಮ ಮಳೆ
* ಕರಾವಳಿಯಲ್ಲಿ ಮಾತ್ರ ಶೇ.19ರಷ್ಟು ಮಳೆಯ ಕೊರತೆ
ಬೆಂಗಳೂರು(ಸೆ.03): ರಾಜ್ಯದಲ್ಲಿ ಸೆಪ್ಟೆಂಬರ್ 5 ಮತ್ತು 6ಕ್ಕೆ ಕರಾವಳಿ ಮತ್ತು ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ರಾಜ್ಯ ಕರಾವಳಿಯಲ್ಲಿ ಸೆಪ್ಟೆಂಬರ್ 4ಕ್ಕೆ ಮಿಂಚು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸುಳಿ ಗಾಳಿ ಸೃಷ್ಟಿಯಾಗಿ ದಕ್ಷಿಣ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಯತ್ತ ಚಲಿಸುತ್ತಿರುವುದರಿಂದ ರಾಜ್ಯದಲ್ಲಿ ವರುಣನ ಆರ್ಭಟ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲಿ ಎಷ್ಟು ಮಳೆ?:
ಉತ್ತರ ಕನ್ನಡದ ಮಂಕಿಯಲ್ಲಿ 6 ಸೆಂಮೀ, ಭಟ್ಕಳ, ಗೋಕರ್ಣ, ದಕ್ಷಿಣ ಕನ್ನಡದ ವಿಟ್ಲ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 4 ಸೆಂಮೀ, ಉಡುಪಿಯ ಕುಂದಾಪುರ, ಕೋಟದಲ್ಲಿ ತಲಾ 3 ಸೆಂಮೀ ಮಳೆ ಬಿದ್ದಿದೆ.
ಗುರುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ನೈರುತ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು.
ಇನ್ನೂ 3 ದಿನ ರಾಜ್ಯಾದ್ಯಂತ ಭಾರೀ ಮಳೆ
ಆಗಸ್ಟ್ ಕೊನೆಯ ವಾರ ಉತ್ತಮ ಮಳೆ:
ಆಗಸ್ಟ್ ತಿಂಗಳಲ್ಲಿ ಆರಂಭದಿಂದ ಮಂಕಾಗಿದ್ದ ಮುಂಗಾರು ಮಳೆ ಕೊನೆಯ ವಾರ ಚೇತರಿಸಿಕೊಂಡಿದೆ. ಆ.26 ರಿಂದ ಸೆ.1ರ ಅವಧಿಯಲ್ಲಿ ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ದಾವಣಗೆರೆ, ಕೋಲಾರ, ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ, ರಾಯಚೂರು, ಬಳ್ಳಾರಿ, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಉತ್ತರ ಕನ್ನಡ, ಕೊಪ್ಪಳ, ಬೆಂಗಳೂರು ನಗರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ವಾಡಿಕೆಯ ಮಳೆ ಬಿದ್ದಿದೆ. ಶಿವಮೊಗ್ಗ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ ಮತ್ತು ಬೆಳಗಾವಿಯಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ.
ವಲಯವಾರು ಗಮನಿಸಿದರೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಷ್ಟು ಮಳೆ ಬಿದ್ದಿದೆ. ಈವರೆಗಿನ ಒಟ್ಟು ಮುಂಗಾರು ಮಳೆಯ ಪ್ರಗತಿ ಗಮನಿಸಿದರೆ ಒಳನಾಡಿನ ಪ್ರದೇಶದಲ್ಲಿ ಧನಾತ್ಮಕ ಪ್ರಮಾಣದಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಮಾತ್ರ ಶೇ.19ರಷ್ಟು ಮಳೆಯ ಕೊರತೆ ಇದೆ.