Asianet Suvarna News Asianet Suvarna News

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ: ಕೊಚ್ಚಿ ಹೋದ ನಾಲ್ವರ ರಕ್ಷಣೆ

* ರಾಯಚೂರು, ಯಾದಗಿರಿಯಲ್ಲಿ ಮಳೆಯ ಆರ್ಭಟ
* ಮನೆಗಳಿಗೆ ಹಾನಿ
* ಬೀದರ್‌, ಬಳ್ಳಾರಿ, ಧಾರವಾಡ, ಗದಗ, ಹಾವೇರಿಯಲ್ಲಿ ಜಿಟಿಜಿಟಿ ಮಳೆ
 

Heavy Rain in North Karnataka Region grg
Author
Bengaluru, First Published Jun 28, 2021, 7:13 AM IST
  • Facebook
  • Twitter
  • Whatsapp

ಬೆಂಗಳೂರು(ಜೂ.28): ಕಲ್ಯಾಣ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಮುಂಗಾರು ಮಳೆ ಸುರಿಯುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇನ್ನು ಹಳ್ಳದ ನೀರಿಗೆ ಕೊಚ್ಚಿ ಹೋದ ನಾಲ್ಕು ಜನರನ್ನು ರಕ್ಷಿಸಿರುವ ಘಟನೆ ರಾಯಚೂರು ಜಿಲ್ಲೆಯ ಹಾಲಾಪುರದಲ್ಲಿ ನಡೆದಿದೆ.

ಕಲಬುರಗಿ, ಕೊಪ್ಪಳ, ವಿಜಯಪುರ, ಬಾಗಲಕೋಟೆಗಳಲ್ಲೂ ಉತ್ತಮ ಮಳೆಯಾಗಿದ್ದು ಬೇಸಿಗೆಯಲ್ಲಿ ಬತ್ತಿ ಹೋಗಿದ್ದ ಹಳ್ಳಕೊಳ್ಳಗಳೀಗ ತುಂಬಿ ಹರಿಯುತ್ತಿವೆ. ಬೀದರ್‌, ಬಳ್ಳಾರಿ, ಧಾರವಾಡ, ಗದಗ, ಹಾವೇರಿಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು ಕೃಷಿಕರ ಮೊಗದಲ್ಲಿ ನಗು ಅರಳಿದೆ. ಇನ್ನುಳಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರಗಳಲ್ಲೂ ಸಾಧಾರಣ ಮಳೆಯಾಗಿದೆ.

ಮುಂಗಾರು ಚುರುಕು: ಗುಮ್ಮಟ ನಗರಿ ವಿಜಯಪುರದಲ್ಲಿ ಥೇಟ್‌ ಮಲೆನಾಡು ವಾತಾವರಣ..!

ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಬಹುಭಾಗದಲ್ಲಿ ಶನಿವಾರ ರಾತ್ರಿಯಿಂದ ಆರಂಭಗೊಂಡ ಮಳೆಯು ಭಾನುವಾರ ಮಧ್ಯಾಹ್ನದವರೆಗೆ ಸುರಿದಿದ್ದು ನಗರ, ಪಟ್ಟಣ ಪ್ರದೇಶಗಳ ಪ್ರಮುಖ ರಸ್ತೆ, ವೃತ್ತಗಳು, ಚರಂಡಿಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪುರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು 195.5 ಮಿಮೀ ಮಳೆ ದಾಖಲಾಗಿದೆ. ಇಲ್ಲಿನ ಹಾಲಾಪುರ ಹಳ್ಳ ತುಂಬಿ ಹರಿಯುತ್ತಿದೆ. ಇಲ್ಲಿ ಬೈಕ್‌ ಮೂಲಕ ಹಳ್ಳ ದಾಟಲು ಮುಂದಾದ ನಾಲ್ಕು ಜನರು ಕೊಚ್ಚಿ ಹೋದ ಘಟನೆ ನಡೆದಿದ್ದು ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಇನ್ನು ಮಸ್ಕಿಯ ಶಂಕರನಗರ ಕ್ಯಾಂಪಿನ ಬಸ್ಸಪ್ಪ ಮಡಿವಾಳ ಅವರಿಗೆ ಸೇರಿದ ಸುಮಾರು 10ಕ್ಕೂ ಹೆಚ್ಚು ಕುರಿ, ಕೋಳಿಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿವೆ.

ಗಾಳಿ- ಮಳೆಗೆ ಕೆರೆಬುದೂರು ಸಮೀಪದ 167 ರಾಷ್ಟ್ರೀಯ ಹೆದ್ದಾರಿ ಮೇಲೆ ವಿದ್ಯುತ್‌ ಕಂಬಗಳು ಉರುಳಿಬಿದ್ದಿದ್ದರ ಪರಿಣಾಮ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಇಡೀ ರಾತ್ರಿ ಸುರಿದ ಮಳೆಯಿಂದ ರಾಯಚೂರು ನಗರದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಸಮಸ್ಯೆ ಅನುಭವಿಸಿದರು.

ಭಾರೀ ಮಳೆ: ಮನೆಗಳಿಗೆ ನುಗ್ಗಿದ ನೀರು, ಕೆರೆಯಂತಾದ ಮಸ್ಕಿ..!

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ಗುರುಮಠಕಲ್‌ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಯಾದಗಿರಿ ನಗರದ ತಗ್ಗುಪ್ರದೇಶಗಳಲ್ಲಿ ಮಳೆಯ ನೀರು ಕೆಲವು ಮನೆಗಳಿಗೆ ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಸುರಪುರ ತಾಲೂಕಿನ ವಿವಿಧೆಡೆ ಐದು ಮನೆಗಳಿಗೆ ನೀರು ನುಗ್ಗಿ ಭಾಗಶಃ ಹಾನಿಯಾಗಿದೆ.

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಗೆ ಡೋಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಹಡಗಿನಾಳ ಗ್ರಾಮಕ್ಕೆ ತೆರಳಲು ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೆಳಮಟ್ಟದ ಸೇತುವೆ ಭಾನುವಾರ ಮುಳುಗಡೆ ಆಗಿದೆ.
 

Follow Us:
Download App:
  • android
  • ios