ಬೆಂಗಳೂರು(ಜು.17): ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪುನರ್ವಸು ಮಳೆ ಗುರುವಾರವೂ ಉತ್ತಮವಾಗಿ ಮಳೆ ಸುರಿದಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

ಕಳೆದೆರಡು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ಕಲಬುರಗಿ ಜಿಲ್ಲೆಯಲ್ಲಿ ಹಳ್ಳಕೊಳ್ಳ ನದಿಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು 500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿದ್ದ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಜೊತೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಚಿಂಚೋಳಿಯಲ್ಲೇ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಕೊರೋನಾ ಗೆದ್ದ 110 ವರ್ಷದ ವೃದ್ಧೆಯನ್ನು ಬಹಿಷ್ಕರಿದ ಗ್ರಾಮಸ್ಥರು

ಇದೇವೇಳೆ ಎರಡು ದೇವಸ್ಥಾನಗಳು ಪ್ರವಾಹದ ನೀರಿನಲ್ಲಿ ಜಲಾವೃತವಾದ ಪರಿಣಾಮ ಕೊಚ್ಚಿಹೋಗುತ್ತಿದ್ದ ಒಟ್ಟು 8 ಭಕ್ತರನ್ನು ರಕ್ಷಿಸಿರುವ ಪ್ರತ್ಯೇಕ ಘಟನೆಗಳು ಚಿಂಚೋಳಿ ತಾಲೂಕಿನಿಂದ ವರದಿಯಾಗಿದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ. ಇನ್ನುಳಿದಂತೆ ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಸುರಿದಿದೆ.

50 ಸಾವಿರ ದಾಟಿದ ಕರ್ನಾಟಕ, ಬೆಂಗಳೂರು ಗಂಡಾಂತರ

8 ಭಕ್ತರ ರಕ್ಷಣೆ: ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಚಿಂಚೋಳಿ ತಾಲೂಕಿನ ನಾಗರಾಳ ಬಳಿ ಇರುವ ಮುಲ್ಲಾಮಾರಿ ಜಲಾಶಯದ ನೀರಿನ ಒಳಹರಿವು ಹೆಚ್ಚಾದ ಕಾರಣ ಏಕಾಏಕಿ 5 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ ನದಿ ಪಾತ್ರದ ಹಳ್ಳಿಗಳಿಗೆ ನೀರು ನುಗ್ಗಿದೆ. ಪರಿಣಾಮ ಚಿಮ್ಮನಚೋಡ್‌ನಲ್ಲಿರುವ ಸಂಗಮೇಶ್ವರ ಮಂದಿರ ಜಲಾವೃತಗೊಂಡು ಇಲ್ಲಿ ಸಿಲುಕಿದ್ದ 5 ಭಕ್ತರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಜೊತೆಗೆ ಚಂದಾಪುರದ ಹನುಮಾನ ದೇವಸ್ಥಾದಲ್ಲಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಅಪಾರ ಬೆಳೆಹಾನಿ:

ಕಲಬುರಗಿ ಜಿಲ್ಲೆಯ ಸುತ್ತಮುತ್ತಲಿನ 7 ಹೋಬಳಿಗಳಲ್ಲಿ ಬುಧವಾರ ಒಂದೇ ರಾತ್ರಿ 10 ಗಂಟೆಗೂ ಅಧಿಕ ಮಳೆ ಸುರಿದಿದ್ದರಿಂದ 100 ಮಿ.ಮೀ. ಮಳೆ ದಾಖಲಾಗಿದ್ದು ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಕಮಲಾಪುರ ತಾಲೂಕಿನಲ್ಲೂ ಹಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬಿತ್ತನೆ ಮಾಡಲಾಗಿದ್ದ ತೊಗರಿ, ಹೆಸರು, ಉದ್ದು, ಎಳ್ಳು ನೀರು ಪಾಲಾಗಿವೆ. ಚಿಂಚೋಳಿಯ ನಾಗರಾಳ ಜಲಾಶಯ, ಅಫಜಲ್ಪುರದ ಸೊನ್ನ ಭೀಮಾ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ನದಿಗೆ ನೀರು ಹರಿಸಲಾಗುತ್ತಿದೆ. ಭೀಮಾ, ಕಾಗಿಣಾ, ಅಮರ್ಜಾ, ಮುಲ್ಲಾಮಾರಿ, ಗಂಡೋರಿ, ಕಮಲಾವತಿ ಹಾಗೂ ಬೆಣ್ಣೆತೊರಾ ನದಿಗಳು ತುಂಬಿ ಹರಿಯುತ್ತಿವೆಯಾದರೂ ಪ್ರವಾಹದ ಮಟ್ಟಇನ್ನೂ ತಲುಪಿಲ್ಲ.

 

ಇದೇ ವೇಳೆ, ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ಶಹಾಪುರ, ವಡಗೇರಾ ಮುಂತಾದ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವ ಪರಿಣಾಮ ದಡದಲ್ಲಿರುವ ಕಂಗಳೇಶ್ವರ ದೇವಸ್ಥಾನ ಮುಳುಗಿದ್ದು, ದೇವಸ್ಥಾನದ ಗೋಪುರವಷ್ಟೇ ಕಾಣುತ್ತಿದೆ.