ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರವಾಹ: ಗೋಕಾಕ್ 40% ಜಲಾವೃತ, 792 ಕುಟುಂಬ ಸ್ಥಳಾಂತರ

ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಶನಿವಾರ ಕರದಂಟುನಗರಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಅಕ್ಷರಶಃ ಜಲದಿಗ್ಧಂಧನಕ್ಕೆ ಒಳಗಾಗಿದೆ. 

Heavy floods in Belagavi district Gokak 40 percent inundated gvd

ಬೆಳಗಾವಿ (ಜು.28): ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಶನಿವಾರ ಕರದಂಟುನಗರಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಅಕ್ಷರಶಃ ಜಲದಿಗ್ಧಂಧನಕ್ಕೆ ಒಳಗಾಗಿದೆ. ನಗರದ ಶೇ.40ಕ್ಕೂ ಹೆಚ್ಚು ಭಾಗ ಜಲಾವೃತಗೊಂಡಿದೆ. ಘಟಪ್ರಭಾ ನದಿಗೆ 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 

ಗೋಕಾಕ್ ಹೊರವಲಯದ ಸೇತುವೆಗಳು ಜಲಾವೃತಗೊಂಡು ನಗರಕ್ಕೆ ಜಲದಿಗ್ಧಂಧನದ ಭೀತಿ ಎದುರಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಮತ್ತು ಚಿಕ್ಕೊಳಿ ಸೇತುವೆಗಳ ಹರಿಯುತ್ತಿದ್ದು, ಫಾಲ್ಸ್ ಹಾಗೂ ಗೋಕಾಕ್ ನಗರದ ಮಧ್ಯೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗೋಕಾಕ್‌ನ ಹಳೇ ದನಗಳ ಪೇಟೆ, ಡೋರ ಓಣಿ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಸಿಂದಿ ಕೂಟದಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

12ಕ್ಕೂ ಅಧಿಕ ಕೈಗಾರಿಕೆಗಳಿಗೆ ನೀರು ನುಗ್ಗಿದೆ. ಗೋಕಾಕ್‌ನ ಸರ್ಕಾರಿ ಪಪೂ ಮಹಾವಿದ್ಯಾಲಯ ಹಾಗೂ ಎಪಿಎಂಸಿಯಲ್ಲಿ ಎರಡು ಕಾಳಜಿ ಕೇಂದ್ರ ತೆರೆಯಲಾಗಿದ್ದು, 155 ಕುಟುಂಬಗಳ 550 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದು, ನೂರಾರು ಜನ ಮನೆಗಳನ್ನು ತೊರೆದಿದ್ದಾರೆ. ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆಯದ್ದರಿಂದ ಇಲ್ಲಿನ ಜನರು ರಸ್ತೆ ಬದಿಯಲ್ಲಿರುವ ಪೆಟ್ರೋಲ್ ಬಂಕ್, ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಜೊತೆಗೆ, ಕೃಷ್ಣಾ ನದಿ ತೀರದ ತಾಲೂಕುಗಳಾದ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕಿನಲ್ಲಿಯೂ ಪ್ರವಾಹ ಉದ್ಭವಿಸಿದೆ. 

ಮಹಾರಾಷ್ಟ್ರ ಮಳೆ: ರಾಜ್ಯದ 4 ಜಿಲ್ಲೆಗಳಲ್ಲಿ ಅಲರ್ಟ್‌, ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ!

ಘಟಪ್ರಭಾ, ಕೃಷ್ಣಾ, ಮಾರ್ಕಂಡೇಯ, ದೂಧಗಂಗಾ, ಹಿರಣ್ಯಕೇಶಿ, ವೇದಗಂಗಾ, ಖಾನಾಪುರ ತಾಲೂಕಿನ ಮಲಪ್ರಭಾ ಸೇರಿ ಜಿಲ್ಲೆಯ ಎಲ್ಲಾನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ41 ಸೇತುವೆಗಳು ಮುಳುಗಡೆಯಾಗಿವೆ. ಜೊತೆಗೆ, ಜಿಲ್ಲೆಯ 232 ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ನದಿ ತೀರದಲ್ಲಿನ 20 ಪ್ರವಾಹ ಪೀಡಿತ ಗ್ರಾಮಗಳಲ್ಲಿನ 792 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 2,427 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ, 1,006 ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

Latest Videos
Follow Us:
Download App:
  • android
  • ios