Asianet Suvarna News Asianet Suvarna News

ಕೊರೋನಾ ಗೆದ್ದವರಿಗೆ ಮತ್ತಷ್ಟು ಆತಂಕ : ಹೃದಯಾಘಾತ, ಗ್ಯಾಂಗ್ರಿನ್ ಭೀತಿ!

  • ಕೊರೋನಾ ಸೋಂಕಿನಿಂದ ಗುಣಮುಖರಾದ ಹಲವರಲ್ಲಿ 3-4 ವಾರಗಳ ಬಳಿಕ ಹೃದಯಾಘಾತದ ಸಮಸ್ಯೆ
  • ರಾಜಧಾನಿಯ ಜಯದೇವ ಆಸ್ಪತ್ರೆಯಲ್ಲಿ ಜೂನ್‌ ಒಂದೇ ತಿಂಗಳಲ್ಲಿ ಇಂತಹ 26 ಪ್ರಕರಣ
heart Attack chances After covid recovery snr
Author
Bengaluru, First Published Jul 7, 2021, 7:20 AM IST

ಬೆಂಗಳೂರು (ಜು.07):  ಕೊರೋನಾ ಸೋಂಕಿನಿಂದ ಗುಣಮುಖರಾದ ಹಲವರಲ್ಲಿ 3-4 ವಾರಗಳ ಬಳಿಕ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ರಾಜಧಾನಿಯ ಜಯದೇವ ಆಸ್ಪತ್ರೆಯಲ್ಲಿ ಜೂನ್‌ ಒಂದೇ ತಿಂಗಳಲ್ಲಿ ಇಂತಹ 26 ಪ್ರಕರಣ ವರದಿಯಾಗಿವೆ.

ಕೊರೋನಾದಿಂದ ಗುಣಮುಖರಾದವರಲ್ಲಿನ ಕೊರೋನೋತ್ತರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಜಯದೇವ ಆಸ್ಪತ್ರೆಯ ವೈದ್ಯರು ‘ರಿಜಿಸ್ಟ್ರಿ’ ನಿರ್ವಹಣೆ ಮಾಡುತ್ತಿದ್ದಾರೆ. ಅದರ ಪ್ರಕಾರ, ಜೂನ್‌ 1 ರಿಂದ ಜೂ.30ರವರೆಗೆ 26 ಮಂದಿ ಕೊರೋನಾ ಜಯಿಸಿದ್ದವರು ಹೃದಯಾಘಾತ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾದಿಂದ ಗುಣಮುಖರಾದ 21 ರಿಂದ 108 ದಿನಗಳ ಅಂತರದಲ್ಲಿ (ಸರಾಸರಿ 51.5 ದಿನ) ಇವರಿಗೆ ಹೃದಯಾಘಾತ ಸಮಸ್ಯೆ ಕಾಣಿಸಿಕೊಂಡಿದೆ.

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ ..

‘ಹೀಗಾಗಿ ಕೊರೋನಾಪೀಡಿತರಾದ ವೇಳೆ ಸೋಂಕು ತೀವ್ರಗೊಂಡಿದ್ದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಇರುತ್ತವೆ. ಹೃದಯ ನಾಳಗಳಲ್ಲಿ ಕ್ಲಾಟ್‌ ಆದರೆ ಹೃದಯ ಸಮಸ್ಯೆ, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಪಾಶ್ರ್ವವಾಯು (ಸಿವಿಟಿ), ಕಾಲಿನಲ್ಲಿ ರಕ್ತ ಹೆಪ್ಪು ಗಟ್ಟಿದರೆ ಕಾಲು ನೀಲಿ ಬಣ್ಣಕ್ಕೆ ತಿರುಗಿ ಗ್ಯಾಂಗ್ರಿನ್‌ನಂತಹ ಸಮಸ್ಯೆ ಆಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಅಲ್ಲದೆ, ಇದರಲ್ಲಿ ಬಹುತೇಕರು ಎರಡನೇ ಅಲೆಯಲ್ಲಿ ಸೋಂಕಿಗೆ ಒಳಪಟ್ಟವರಾಗಿದ್ದಾರೆ. ಹೀಗಾಗಿ ಎರಡನೇ ಅಲೆಯಲ್ಲಿ ಸೋಂಕಿತರಾದವರ ಮೇಲೆ ನಿಗಾ ವಹಿಸಲು ಇನ್ನೂ 3-4 ತಿಂಗಳ ಕಾಲ ರಿಜಿಸ್ಟ್ರಿ ನಿರ್ವಹಣೆ ಮಾಡುತ್ತೇವೆ ಎಂದರು.

ಕೊರೋನಾ: ಎರಡೂ ಅಲೆಯಿಂದ ಪಾರಾದವರಿಗೆ 3ನೇ ಅಲೆ ಕಂಟಕ ...

ಅಷ್ಟೂಮಂದಿ ಗುಣಮುಖ:  ಕೊರೋನೋತ್ತರ ಹೃದಯಾಘಾತ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 26 ಮಂದಿಯೂ ಸೂಕ್ತ ವೇಳೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹೀಗಾಗಿ 26 ಮಂದಿಯೂ ಸೂಕ್ತ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. 26 ಮಂದಿಯಲ್ಲಿ 9 ಮಂದಿ ಮಹಿಳೆಯರಿದ್ದು, ಎಲ್ಲರೂ 30 ವರ್ಷ ಮೇಲ್ಪಟ್ಟವರಾಗಿದ್ದಾರೆ. 4 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

26 ಮಂದಿಯಲ್ಲಿ ಕೊರೋನಾ ಬಂದ ವೇಳೆ 10 ಮಂದಿ (ಇಬ್ಬರು ಐಸಿಯು) ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚು ರೋಗ ಲಕ್ಷಣ ಹೊಂದಿರದ ಉಳಿದ 16 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೋನಾದಿಂದ ಗುಣಮುಖರಾಗಿದ್ದರು. ಹೆಚ್ಚು ರೋಗ ಲಕ್ಷಣ ಹೊಂದಿಲ್ಲದ 16 ಮಂದಿಗೂ ಹೃದಯಾಘಾತ ಉಂಟಾಗಿರುವುದು ಆತಂಕ ಮೂಡಿಸಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಡಾ.ಸಿ.ಎನ್‌. ಮಂಜುನಾಥ್‌ ಮಾರ್ಗದರ್ಶನದಲ್ಲಿ ಹೃದ್ರೋಗ ತಜ್ಞ ಡಾ. ರಾಹುಲ್‌ ಎಸ್‌. ಪಾಟೀಲ್‌ ನೇತೃತ್ವದ ಡಾ. ಎಲ್‌. ಶ್ರೀಧರ್‌, ಜಯಶ್ರೀ ಖರ್ಗೆ, ನಟರಾಜ್‌ ಶೆಟ್ಟಿಹಾಗೂ ಚೇತನ್‌ಕುಮಾರ್‌ ವೈದ್ಯರ ತಂಡ ರಿಜಿಸ್ಟ್ರಿ ನಿರ್ವಹಣೆ ಮಾಡುತ್ತಿದೆ.

30 ವರ್ಷ ಮೇಲ್ಪಟ್ಟವರು ಹೃದಯ ಪರೀಕ್ಷೆ ಮಾಡಿಸಿ

ಕೊರೋನಾದಿಂದ ಗುಣಮುಖವಾದರೂ 30 ವರ್ಷ ಮೇಲ್ಪಟ್ಟವರು ಇಸಿಜಿ, ಎಕೊ, ಟ್ರೆಡ್‌ಮಿಲ್‌ ಇಸಿಜಿ, ಡಿ ಡೈಮರ್‌ ಪರೀಕ್ಷೆ ಮಾಡಿಸುವುದು ಉತ್ತಮ. ಅಲ್ಲದೆ, ಹೃದಯಾಘಾತದಂತಹ ಸಮಸ್ಯೆ ತಡೆಯಲು 6-8 ವಾರ ವೈದ್ಯರ ಸಲಹೆ ಮೇರೆಗೆ ರಕ್ತ ತೆಳುಗೊಳಿಸುವ (ಬ್ಲಡ್‌ ಥಿನ್ನರ್‌) ಮಾತ್ರೆ ಸೇವಿಸಬಹುದು. ಇದು ರಕ್ತ ಹೆಪ್ಪು ಗಟ್ಟುವುದನ್ನು ತಪ್ಪಿಸಿ ಕ್ಲಾಟ್‌ ಆಗದಂತೆ ತಡೆಯುತ್ತದೆ ಎಂದು ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ. ಜಯದೇವ ಆಸ್ಪತ್ರೆಗೆ ಜನವರಿ 1ರಿಂದ ಈವರೆಗೆ 400 ಮಂದಿ ಸಕ್ರಿಯ ಸೋಂಕಿತರು ಹೃದಯ ಸಮಸ್ಯೆಯಿಂದ ದಾಖಲಾಗಿದ್ದರು. ಇದರಲ್ಲಿ ಶೇ.19 ರಷ್ಟುಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೀಗಾಗಿ ಈಗಾಗಲೇ ಹೃದಯ ಸಮಸ್ಯೆಯುಳ್ಳವರು ಎಚ್ಚರಿಕೆಯಿಂದ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios