Health minister UT Khader warns private hospitals ಬಾಕಿ ಬಿಲ್ ಪಾವತಿಯಾಗಿಲ್ಲವೆಂದು ಮೃತದೇಹ ತಡೆಹಿಡಿಯಬಾರದು ಹಾಗೂ ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಅ.23): ರೋಗಿಗಳ ಮೇಲೆ ವಿಪರೀತ ಶುಲ್ಕ ಹೊರೆ ಬೀಳಬಾರದು. ಬಾಕಿ ಬಿಲ್ ಪಾವತಿ ಆಗಿಲ್ಲ ಎಂಬ ಕಾರಣಕ್ಕೆ ಯಾವುದೇ ಆಸ್ಪತ್ರೆ ಮೃತದೇಹ ತಡೆ ಹಿಡಿಯಬಾರದು. ಈ ಬಗ್ಗೆ ಸ್ಪಷ್ಟ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜನರ ಮೇಲಿನ ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಗುರುವಾರ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಸಂಘ (ಫನಾ) ಜೊತೆ ಸಚಿವರು ಸಭೆ ನಡೆಸಿದರು.

ಖಾಸಗಿ ಆಸ್ಪತ್ರೆ ಚಿಕಿತ್ಸೆ ದರಪಟ್ಟಿ ಪ್ರದರ್ಶನ ಕಡ್ಡಾಯ

ಈ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ ಪಟ್ಟಿ ಪ್ರದರ್ಶನ ಕಡ್ಡಾಯ. ಪ್ರಮುಖ ದರ ಪಟ್ಟಿಯನ್ನು ವಿಭಿನ್ನ ಕಲರ್‌ನಲ್ಲಿ ಪ್ರದರ್ಶಿಸಬೇಕು. ದರಪಟ್ಟಿ ಪ್ರದರ್ಶನದಲ್ಲಿ ಪಾರದರ್ಶಕತೆ ಇರಬೇಕು ಹಾಗೂ ನ್ಯಾಯಯುತ, ಏಕರೂಪ ದರ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.

ದರಪಟ್ಟಿ ಪ್ರದರ್ಶಿಸಲು ಸಿದ್ಧ:

ಇದಕ್ಕೆ ಆಕ್ಷೇಪಿಸಿದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ದರ ಪಟ್ಟಿ ಪ್ರದರ್ಶಿಸಲು ಸಿದ್ಧರಿದ್ದೇವೆ. ಅದಕ್ಕೆ ಸಮಯಾವಕಾಶ ಬೇಕು. ಆದರೆ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಗಳ ದರ ಪ್ರದರ್ಶನ ಕಷ್ಟವಾಗಲಿದೆ. ಶಸ್ತ್ರಚಿಕಿತ್ಸೆಗೆ ದರ ಪ್ರದರ್ಶನ ಮಾಡಿದರೆ ಅದಕ್ಕೆ ಪೂರಕ ಅಥವಾ ಹೆಚ್ಚುವರಿಯಾಗಿ ತಗಲುವ ವೆಚ್ಚಗಳ ಬಗ್ಗೆ ರೋಗಿ ಹಾಗೂ ಆಸ್ಪತ್ರೆಗಳ ನಡುವೆ ಹೊಸ ಗೊಂದಲ ಉಂಟಾಗಲಿದೆ. ಈ ಬಗೆಗಿನ ಸಮಸ್ಯೆಗಳನ್ನು ವಾಸ್ತವಿನ ನೆಲೆಗಟ್ಟಿನಲ್ಲಿ ಪುನರ್‌ ಪರಿಶೀಲನೆ ಮಾಡಬೇಕು ಎಂದು ಹೇಳಿದರು ಎನ್ನಲಾಗಿದೆ.

ಹೀಗಾಗಿ ಖಾಸಗಿ ಆಸ್ಪತ್ರೆಗಳ ವಿಪರೀತ ಶುಲ್ಕ ವಸೂಲಿ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರೋಗಿಗಳಿಗೆ ತೊಂದರೆಯಾಗದಂತೆ ಮತ್ತು ಜನರಿಗೆ ಮೋಸವಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಯು.ಟಿ. ಖಾದರ್‌ ತಿಳಿಸಿದರು ಎಂದು ತಿಳಿದು ಬಂದಿದೆ.

ಸರ್ಕಾರ ಯಾವುದೇ ಗೊಂದಲ ಉಂಟಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸಲಿದೆ. ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಚಿಕಿತ್ಸೆ ನ್ಯಾಯಯುತ ದರದಲ್ಲಿ ಸಿಗುವಂತೆ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗಳು ಸಹಕರಿಸಬೇಕು ಎಂದು ಕೋರಿದರು.

ಕ್ಯಾನ್ಸರ್, ಹೃದಯ, ಕಿಡ್ನಿ ಸೇರಿ ದುಬಾರಿ ಜೀವರಕ್ಷಕ ಔಷಧಗಳ ದರ ಕಡಿಮೆ ಮಾಡುವ ಮತ್ತು ಅನಧಿಕೃತ ಎಂಆರ್‌ಪಿ ಹೆಚ್ಚಳಕ್ಕೆ ಕಡಿವಾಣ ಹಾಕುವ ಕುರಿತು ಚರ್ಚಿಸಲಾಯಿತು. ಇದಕ್ಕೆ ಆಸ್ಪತ್ರೆಗಳ ಪ್ರತಿನಿಧಿಗಳು, ಲ್ಯಾಂಡಿಂಗ್‌ ದರ ಹಾಗೂ ಗರಿಷ್ಠ ಮಾರಾಟ ದರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಔಷಧ ತಯಾರಕರು ಹಾಗೂ ವಿತರಕರ ಜತೆ ಸರ್ಕಾರ ಚರ್ಚಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಸಚಿವರು ಮುಂದಿನ ದಿನಗಳಲ್ಲಿ ಔಷಧ ತಯಾರಕರು ಮತ್ತು ವಿತರಕರ ಜೊತೆಯೂ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ವಿಮಾ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ:

ಸಭೆಯಲ್ಲಿ ಆರೋಗ್ಯ ವಿಮೆ ಹೊಂದಿರುವ ರೋಗಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಯಲು ಮತ್ತು ಕ್ಲೇಮ್ ಪ್ರಕ್ರಿಯೆ ಸರಳಗೊಳಿಸಲು ವಿಮಾ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆಪಿಎಂಇ ಕಾಯ್ದೆಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಚರ್ಚಿಸಲಾಯಿತು. ಇವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್‌ ಭರವಸೆ ನೀಡಿದರು.