104 ಆರೋಗ್ಯ ಸಹಾಯವಾಣಿ ಸ್ಥಗಿತ   ನ.29ರಿಂದ ಸ್ಥಗಿತವಾಗಿರುವ ಸೇವೆ  

ವರದಿ : ಶಿವಾನಂದ ಗೊಂಬಿ

ಸುವರ್ಣಸೌಧ (ಡಿ.23): ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗಬೇಕೆಂಬ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಆರೋಗ್ಯ ಸಹಾಯವಾಣಿಯೇ (HelpLine) ‘ಅನಾರೋಗ್ಯ’ಕ್ಕೆ ಈಡಾಗಿದೆ. ಬಿಎಸ್‌ಎನ್‌ಎಲ್‌ ಬಿಲ್‌ ಪಾವತಿಸದ ಕಾರಣ 104 ಆರೋಗ್ಯ ವಾಣಿ ಕಳೆದ ನ.29ರಿಂದ ನಿಷ್ಕ್ರೀಯವಾಗಿದೆ. ಸಿಬ್ಬಂದಿ ಕೆಲಸಕ್ಕೆ ಹೋಗಿ ಖಾಲಿ ಕುಳಿತುಕೊಂಡು ವಾಪಸ್‌ ಬರುವುದೇ ಆಗಿದೆ. ಇದನ್ನು ನೋಡಿದರೆ 104 ಸಹಾಯವಾಣಿಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಹುನ್ನಾರ ಅಡಗಿದೆಯೇ ಎಂಬ ಪ್ರಶ್ನೆ ಸಿಬ್ಬಂದಿಯದ್ದಾಗಿದೆ.

ಕಾರಣವೇನು?: ಜಗದೀಶ ಶೆಟ್ಟರ್‌ (Jagadish Shettar) ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಈ ಸೇವೆ ಪ್ರಾರಂಭಿಸಲಾಗಿತ್ತು. ಮೊದಲ ಕೇಂದ್ರ ಹುಬ್ಬಳ್ಳಿಯ ಐಟಿ ಪಾರ್ಕ್ಲ್ಲಿ 2013ರಲ್ಲಿ ಪ್ರಾರಂಭವಾದರೆ, ಬೆಂಗಳೂರಲ್ಲಿ (Bengaluru) 2018ರಲ್ಲಿ 2ನೆಯ ಕೇಂದ್ರ ಪ್ರಾರಂಭವಾಗಿತ್ತು.

ಹೈದರಾಬಾದ್‌ (Hyderabad) ಮೂಲದ ಕಂಪನಿಯೂ ಈ ಆರೋಗ್ಯ ಸಹಾಯವಾಣಿಯ ಗುತ್ತಿಗೆ ಪಡೆದು ನಿರ್ವಹಣೆ ಮಾಡುತ್ತಿವೆ. ಸಣ್ಣ ಪುಟ್ಟಆರೋಗ್ಯ (Health) ಸಮಸ್ಯೆ, ಸರ್ಕಾರಿ ಆರೋಗ್ಯ ಸಂಸ್ಥೆಗಳ ಮಾಹಿತಿ, ಸಲಹೆ ಕೋರಿ ಕೊರೋನಾ ವಕ್ಕರಿಸುವ ಮುನ್ನ ಪ್ರತಿನಿತ್ಯ 18000-20000 ಕರೆಗಳು ಇದಕ್ಕೆ ಬರುತ್ತಿದ್ದವು. ನಂತರ ಮಹಿಳಾ ಸಹಾಯವಾಣಿ 181, ಕೋವಿಡ್‌ ಸಮಯದಲ್ಲಿ ರಾಜ್ಯದ ಜನತೆಗೆ ಅನುಕೂಲಕ್ಕಾಗಿ ಇದೇ ಕೇಂದ್ರಗಳಲ್ಲಿ 14410 ಆಪ್ತಮಿತ್ರ ಹಾಗೂ 1075 ಕೋವಿಡ್‌ (Covid) ಕೇಂದ್ರೀಕೃತ ಸಹಾಯವಾಣಿ ಸೇವೆ ಕೂಡ ಪ್ರಾರಂಭಿಸಲಾಗಿತ್ತು. ಕೋವಿಡ್‌ (Covid) ಸಂದರ್ಭದಲ್ಲಿ ಇಲ್ಲಿಗೆ ಸರಿಸುಮಾರು 50 ಸಾವಿರಕ್ಕೂ ಅಧಿಕ ಕರೆಗಳು ಬಂದಿರುವುದುಂಟು. ಹೀಗೆ ಇಲ್ಲಿಗೆ ಕರೆ (Call) ಮಾಡಿದವರಿಗೆ ಅಗತ್ಯ ಸಲಹೆ, ಮಾಹಿತಿ ನೀಡುವುದರ ಜತೆಗೆ ಧೈರ್ಯ ತುಂಬುವ ಕೆಲಸವನ್ನು ಈ ಸಹಾಯವಾಣಿ ಮಾಡಿದ್ದುಂಟು.

ಸ್ಥಗಿತಕ್ಕೆ ಕಾರಣವೇನು? ಬಿಎಸ್‌ಎನ್‌ಎಲ್‌ ಮೂಲಕ ಇಂಟರ್‌ನೆಟ್‌ ಹಾಗೂ ಸ್ಥಿರ ದೂರವಾಣಿ ಅಳವಡಿಸಲಾಗಿದೆ. ಬಿಎಸ್‌ಎನ್‌ಎಲ್‌ಗೆ ಕಳೆದ 3-4 ತಿಂಗಳಿಂದ ಬಿಲ್‌ ಪಾವತಿಸಿಲ್ಲ. ಇದರಿಂದಾಗಿ 30 ಲಕ್ಷ ರೂ. ಬಿಲ್‌ ಪಾವತಿಸುವುದು ಬಾಕಿಯುಳಿದಿದೆ. ಹೀಗಾಗಿ ಬಿಎಸ್‌ಎನ್‌ಎಲ್‌ ಇದರ ಸಂಪರ್ಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಬೆಂಗಳೂರಲ್ಲಿನ 150 ಹಾಗೂ ಹುಬ್ಬಳ್ಳಿಯ 260 ಜನ ಸಿಬ್ಬಂದಿ ಅಂದರೆ ಬರೋಬ್ಬರಿ 410 ಜನ ಸಿಬ್ಬಂದಿ ದಿನಕ್ಕೆ 3 ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಪರ್ಕ ಕಡಿತಗೊಂಡಿರುವುದರಿಂದ ಪ್ರತಿನಿತ್ಯ ಬರುವುದು ಲಾಗಿನ್‌ ಆಗುವುದು 7 ಗಂಟೆ ಸುಮ್ಮನೆ ಕುಳಿತು ಮತ್ತೆ ಮರಳಿ ಮನೆಗೆ ತೆರಳುವುದೇ ಆಗಿದೆ. ಯಾವುದೇ ಕೆಲಸವಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.

ವೇತನವೂ ಇಲ್ಲ: ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಕಳೆದ ನಾಲ್ಕು ತಿಂಗಳಿಂದ ವೇತನವನ್ನೂ ಪಾವತಿಸಿಲ್ಲ. ಈ ಬಗ್ಗೆ ಕೇಳಿದರೆ ಸರಿಯಾಗಿ ಉತ್ತರವನ್ನೂ ನೀಡುತ್ತಿಲ್ಲ ಎಂಬ ದೂರು ಸಿಬ್ಬಂದಿಯದು. ಇದೀಗ ಎಲ್ಲೆಡೆ ಒಮಿಕ್ರಾನ್‌ ಭೀತಿ ಶುರುವಾಗಿದೆ. ಇಂತಹ ಸಮಯದಲ್ಲೇ ಆರೋಗ್ಯವಾಣಿ ಸಹಾಯವಾಣಿ ಅನಾರೋಗ್ಯಕ್ಕೀಡಾಗಿರುವುದು ಜನರಿಗೆ ತೊಂದರೆಯಾಗಿದೆ. ಇನ್ನಾದರೂ ಸರ್ಕಾರ ಆರೋಗ್ಯ ಸಹಾಯವಾಣಿ ಸಮಸ್ಯೆ ಬಗೆಹರಿಸಿ ಮತ್ತೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಯ.

ಕೆಲದಿನಗಳಿಂದ ಸೇವೆಯಲ್ಲಿ ಸಮಸ್ಯೆ ಆಗಿದ್ದು ನಿಜ. ಈಗಾಗಲೇ ಬಿಎಸ್‌ಎನ್‌ಎಲ್‌ ಅಧಿ​ಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಷ್ಟುಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ.

- ಪ್ರಭುದೇವಗೌಡ, ನೋಡಲ್‌ ಅಧಿಕಾರಿ, 104 ಆರೋಗ್ಯವಾಣಿ

  •  ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗಬೇಕೆಂಬ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಆರೋಗ್ಯ ಸಹಾಯವಾಣಿ
  • ಬಿಎಸ್‌ಎನ್‌ಎಲ್‌ ಬಿಲ್‌ ಪಾವತಿಸದ ಕಾರಣ 104 ಆರೋಗ್ಯವಾಣಿ ಕಳೆದ ನ.29ರಿಂದ ಸ್ಥಗಿತ
  •  ಸಿಬ್ಬಂದಿ ಕೆಲಸಕ್ಕೆ ಹೋಗಿ ಖಾಲಿ ಕುಳಿತುಕೊಂಡು ವಾಪಸ್‌ ಬರುವುದೇ ಆಗಿದೆ.