ರಾಜ್ಯದ  ವೈದ್ಯಕೀಯ ಕ್ಷೇತ್ರದ ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಮಹತ್ತರ ಪ್ರಗತಿ ಕೋವಿಡ್‌ ಎರಡನೇ ಅಲೆಯ ತೀವ್ರತೆಯನ್ನು ತಗ್ಗಿಸಲು ಮತ್ತು ರೋಗಿಗಳಿಗೆ ಸೂಕ್ತ ಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಹಕಾರಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಮಾಹಿತಿ

 ಬೆಂಗಳೂರು (ಮೇ.24):  ರಾಜ್ಯಕ್ಕೆ ಕೋವಿಡ್‌-19 ಕಾಲಿಟ್ಟ ಬಳಿಕ ವೈದ್ಯಕೀಯ ಕ್ಷೇತ್ರದ ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಮಹತ್ತರ ಪ್ರಗತಿಯಾಗಿದೆ. ಇದು ಕೋವಿಡ್‌ ಎರಡನೇ ಅಲೆಯ ತೀವ್ರತೆಯನ್ನು ತಗ್ಗಿಸಲು ಮತ್ತು ರೋಗಿಗಳಿಗೆ ಸೂಕ್ತ ಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಡಾ. ಸುಧಾಕರ್‌, ದಿನಕ್ಕೆ ಒಂದೂವರೆ-ಎರಡು ಲಕ್ಷ ಕೋವಿಡ್‌ ಪರೀಕ್ಷೆ ನಡೆಸುವ ಸಾಮರ್ಥ್ಯ ರಾಜ್ಯಕ್ಕೆ ಸಿದ್ಧಿಸಿದೆ. ಇದಲ್ಲದೆ 1,015 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಲಭ್ಯತೆ, 22 ಸಾವಿರಕ್ಕೂ ಹೆಚ್ಚು ಆಕ್ಸಿಜನ್‌ ಹಾಸಿಗೆ, ಅಗತ್ಯಕ್ಕೆ ತಕ್ಕಷ್ಟುರೆಮ್‌ಡೆಸಿವಿರ್‌ ಔಷ​ಧ ಪೂರೈಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಡುವೆ ಸಮನ್ವಯ ಸಾಧಿಸಲು ಸೂಚನೆ ನೀಡಿದ್ದು, ಅದರಂತೆ ಎರಡೂ ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿಸಿ ಆರೋಗ್ಯ ರಂಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಫೆಬ್ರವರಿ ಅಂತ್ಯಕ್ಕೆ ದಿನಕ್ಕೆ 60-70 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ನಂತರ ದಿನವೊಂದಕ್ಕೆ ಒಂದೂವರೆ ಲಕ್ಷ ಪರೀಕ್ಷೆ ನಡೆಸಲಾಗಿದೆ. ಮೇ 22ರವರೆಗೆ 2.85 ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 2.38 ಕೋಟಿ ಪರೀಕ್ಷೆಗಳು ಆರ್‌ಟಿ-ಪಿಸಿಆರ್‌ ಟೆಸ್ಟ್‌ಗಳಾಗಿವೆ. ಕೇಂದ್ರ ಸರ್ಕಾರ 70:30 ಅನುಪಾತದಲ್ಲಿ ಆರ್‌ಟಿ-ಪಿಸಿಆರ್‌ ಹಾಗೂ ರಾರ‍ಯಪಿಡ್‌ ಆಂಟಿಜೆನ್‌ ಪರೀಕ್ಷೆ ಮಾಡಲು ಸೂಚಿಸಿದ್ದರೆ, ರಾಜ್ಯದಲ್ಲಿ ಶೇ.80ಕ್ಕಿಂತ ಹೆಚ್ಚು ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. 2020ರ ಫೆಬ್ರವರಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಸುವ ಕೇವಲ 2 ಲ್ಯಾಬ್‌ಗಳಿದ್ದರೆ, ಈಗ 91 ಸರ್ಕಾರಿ ಮತ್ತು 150 ಖಾಸಗಿ ಲ್ಯಾಬ್‌ಗಳು ಸೇರಿ ಒಟ್ಟು 241 ಲ್ಯಾಬ್‌ಗಳಿವೆ ಎಂದು ತಿಳಿಸಿದ್ದಾರೆ.

ಆಕ್ಸಿಜನ್‌ ಸಾಮರ್ಥ್ಯ ಹೆಚ್ಚಳ: 2020ರ ಮಾಚ್‌ರ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ 1,970 ಆಕ್ಸಿಜನ್‌ ಹಾಸಿಗೆಗಳಿದ್ದವು. ಹೊಸದಾಗಿ 22,001 ಆಕ್ಸಿಜನ್‌ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದರಿಂದ ಒಟ್ಟು ಆಕ್ಸಿಜನ್‌ ಹಾಸಿಗೆ ಸಂಖ್ಯೆ 23,971ಕ್ಕೆ ಏರಿಕೆಯಾಗಿದೆ. ಈ ಹಿಂದೆ 444 ಐಸಿಯು ಹಾಸಿಗೆ ಇದ್ದರೆ ಹೊಸದಾಗಿ 701 ಐಸಿಯು ಹಾಸಿಗೆ ಅಳವಡಿಸಲಾಗಿದ್ದು ಒಟ್ಟು ಐಸಿಯು ಹಾಸಿಗೆ ಸಂಖ್ಯೆ 1,145ಕ್ಕೆ ಏರಿಕೆಯಾಗಿದೆ. 610 ವೆಂಟಿಲೇಟರ್‌ ಇದ್ದದ್ದು ಹೊಸದಾಗಿ 1,548 ವೆಂಟಿಲೇಟರ್‌ ಅಳವಡಿಸುವ ಮೂಲಕ ಒಟ್ಟು ಸಂಖ್ಯೆ 2,158ಕ್ಕೆ ಏರಿಸಲಾಗಿದೆ. ಹೊಸದಾಗಿ 1,248 ಎಚ್‌ಎಫ್‌ಎನ್‌ಸಿ ಹಾಸಿಗೆ ಅಳವಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಕೊರೋನಾ ಲಸಿಕೆ ಗೊಂದಲಗಳಿಗೆ ತೆರೆ, 18 ರಿಂದ 44 ವಯಸ್ಸಿನವರಿಗೆ ಸದ್ಯಕ್ಕಿಲ್ಲ ...

ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ 4,700 ಆಕ್ಸಿಜನ್‌ ಹಾಸಿಗೆಗಳಿದ್ದವು. ಹೊಸದಾಗಿ 4,705 ಹಾಸಿಗೆ ಅಳವಡಿಸಲಾಗಿದೆ. ಇದರಿಂದ ಒಟ್ಟು ಆಕ್ಸಿಜನ್‌ ಹಾಸಿಗೆ ಸಂಖ್ಯೆ 9,405ಕ್ಕೆ ಏರಿಕೆಯಾಗಿದೆ. 341 ವೆಂಟಿಲೇಟರ್‌ ಇದ್ದು, ಹೊಸದಾಗಿ 305 ಅಳವಡಿಸಿ ಒಟ್ಟು ಸಂಖ್ಯೆಯನ್ನು 646ಕ್ಕೆ ಏರಿಸಲಾಗಿದೆ. 15 ಎಚ್‌ಎಫ್‌ಎನ್‌ಸಿ ಹಾಸಿಗೆ ಇದ್ದು, 555 ಹೊಸದಾಗಿ ಅಳವಡಿಸಿದ್ದರಿಂದ ಒಟ್ಟು ಸಂಖ್ಯೆ 570ಕ್ಕೆ ಏರಿಕೆಯಾಗಿದೆ. 151 ಕೆಎಲ್‌ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಸೌಲಭ್ಯವಿತ್ತು. ಹೊಸದಾಗಿ 73 ಕೆಎಲ್‌ ಅಳವಡಿಸಿ, ಒಟ್ಟು ಸಾಮರ್ಥ್ಯವನ್ನು 224 ಕೆಎಲ್‌ಗೆ ಏರಿಸಲಾಗಿದೆ ಎಂದು ಸುಧಾಕರ್‌ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 815 ಟನ್‌ ಆಕ್ಸಿಜನ್‌ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಸರ್ಕಾರದಿಂದ 1,015 ಟನ್‌ ಹಂಚಿಕೆಯಾಗಿದೆ. ಯಾದಗಿರಿ, ಕೆಜಿಎಫ್‌ನಲ್ಲಿ ಎರಡು ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಡಿಆರ್‌ಡಿಒ ನೆರವಿನಲ್ಲಿ 1,000 ಎಲ್‌ಪಿಎಂ ಸಾಮರ್ಥ್ಯದ ಮೂರು ಆಕ್ಸಿಜನ್‌ ಘಟಕಗಳನ್ನು ಸಿ.ವಿ. ರಾಮನ್‌ ಆಸ್ಪತ್ರೆ, ಕಲಬುರ್ಗಿ ಇಎಸ್‌ಐ ಮೆಡಿಕಲ್‌ ಕಾಲೇಜು, ಕೊಪ್ಪಳ ಮೆಡಿಕಲ್‌ ಸೈನ್ಸಸ್‌ ಸಂಸ್ಥೆಯಲ್ಲಿ ಆರಂಭಿಸಲಾಗುತ್ತಿದೆ. ಬಳ್ಳಾರಿಯಲ್ಲಿ 1,000 ಆಕ್ಸಿಜನ್‌ ಹಾಸಿಗೆಯುಳ್ಳ ಆಸ್ಪತ್ರೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವು 600 ಎಲ್‌ಪಿಎಂ ಸಾಮರ್ಥ್ಯದ 6 ಪಿಎಸ್‌ಎ ಘಟಕ ಆರಂಭಕ್ಕೆ ಅನುಮೋದನೆ ನೀಡಿದೆ. 10 ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಸುಮಾರು 1000 ಮೆಟ್ರಿಕ್‌ ಟನ್‌ ಆಕ್ಸಿಜನ್‌ ರಾಜ್ಯಕ್ಕೆ ಪೂರೈಕೆಯಾಗಿದೆ ಎಂದು ತಿಳಿಸಿದ್ದಾರೆ.

ರೆಮ್‌ಡೆಸಿವಿರ್‌ನ 5 ಲಕ್ಷ ವಯಲ್ಸ್‌ ಖರೀದಿಗೆ ಜಾಗತಿಕ ಟೆಂಡರ್‌ ಕರೆಯಲಾಗಿದೆ. ಮೇನಲ್ಲಿ 51,360 ವಯಲ್ಸ್‌ ಖರೀದಿಗೆ ಆದೇಶಿಸಿದ್ದು, 11,000 ವಯಲ್ಸ್‌ ದೊರೆತಿದೆ. ಸಿಎಸ್‌ಆರ್‌ನಡಿ 900 ವಯಲ್ಸ್‌ ಪಡೆಯಲಾಗಿದೆ. ಕೇಂದ್ರ ಸರ್ಕಾರದಿಂದ 56,943 ವಯಲ್ಸ್‌ ಪಡೆಯಲಾಗಿದೆ ಎಂದು ಡಾ. ಸುಧಾಕರ್‌ ಹೇಳಿದ್ದಾರೆ.

ರಾಜ್ಯದ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವ ಗುರಿಯೊಂದಿಗೆ ಹಂತಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಮೇ 22ರವರೆಗೆ 1.20 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಪೂರೈಸಿರುವ 1.13 ಕೋಟಿ ಡೋಸ್‌ ಜೊತೆಗೆ ರಾಜ್ಯ ಸರ್ಕಾರ 14.94 ಲಕ್ಷ ಡೋಸ್‌ ಲಸಿಕೆಯನ್ನು ಈಗಾಗಲೇ ಖರೀದಿಸಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಕೋವಿಡ್‌ ನಂತರದ ಕಾಲದಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಸಾಕಷ್ಟುಪ್ರಗತಿ ಸಾಧಿ​ಸಲಾಗಿದೆ. ಆರ್ಥಿಕ ಸಂಕಷ್ಟವಿದ್ದರೂ ಹೆಚ್ಚು ಸಂಪನ್ಮೂಲವನ್ನು ಬಳಸಿ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಗಮನಹರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ‘ಆರೋಗ್ಯ ಕರ್ನಾಟಕ’ ನಿರ್ಮಾಣ ಸಾಕಾರವಾಗಲಿದೆ.

-ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona