Asianet Suvarna News Asianet Suvarna News

ಹೆಡ್‌ಬುಷ್‌ ಚಿತ್ರದಲ್ಲಿ ವೀರಗಾಸೆಗೆ ಅವಮಾನ, 'ಮರು ಚಿಂತನೆ ನಡೆಸಿ' ಎಂದ ಸಂಸ್ಕೃತಿ ಸಚಿವ!

ಡಾಲಿ ಧನಂಜಯ ನಟನೆಯ ಇತ್ತೀಚಿನ ಚಿತ್ರ ಹೆಡ್‌ ಬುಷ್‌ನಲ್ಲಿ ಜನಪದ ನೃತ್ಯ ವೀರಗಾಸೆಗೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಈ ಕುರಿತಾಗಿ ಮರುಚಿಂತನೆ ನಡೆಸಿ ಎಂದು ಹೇಳಿದ್ದಾರೆ.
 

Head bush Movie veeragase Karaga Controversy Kannada and Culture Minister Sunil Kumar Karkala Comments san
Author
First Published Oct 26, 2022, 6:17 PM IST

ಬೆಂಗಳೂರು (ಅ.26): ಬೆಂಗಳೂರು ಭೂಗತ ಜಗತ್ತಿನ ಕಥೆ ಹೊಂದಿರುವ ಕನ್ನಡ ಚಿತ್ರ ಹೆಡ್‌ಬುಷ್‌ನಲ್ಲಿ ಜನಪದ ನೃತ್ಯ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ವೀರಗಾಸೆಗೆ ಅವಮಾನ ಮಾಡಿರುವುದು, ಕೆಲವು ವರ್ಗದ ಪ್ರೇಕ್ಷಕರ ಭಾವನೆಗಳಿ ಧಕ್ಕೆ ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತಾಗಿ ಪರ ವಿರೋಧ ಚರ್ಚೆಗಳೂ ಆರಂಭವಾಗಿದೆ. ಚಿತ್ರದಲ್ಲಿ ವೀರಗಾಸೆ ನರ್ತಕರನ್ನು ಹಾಗೂ ನೃತ್ಯವನ್ನು ಅಪಮಾನ ಮಾಡುವ ರೀತಿಯಲ್ಲಿ ತೋರಿಸಲಾಗಿದೆ ಹಾಗಾಗಿ ಚಿತ್ರ ತಂಡ ಈ ದೃಶ್ಯವನ್ನು ತೆಗೆದುಹಾಕಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ನಟ ಡಾಲಿ ಧನಂಜಯ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ವೀರಗಾಸೆಗೆ ಅವಮಾನ ಮಾಡುವಂಥ ಯಾವುದೇ ದೃಶ್ಯ ಇದರಲ್ಲಿಲ್ಲ. ಚಿತ್ರವನ್ನು ವೀಕ್ಷಿಸದೇ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ಹೇಳಿದ್ದಾರೆ. ಈ ಎಲ್ಲಾ ವಿವಾದಗಳ ನಡುವೆ ರಾಜ್ಯ ಸರ್ಕಾರ ಕೂಡ ಈ ವಿವಾದದ ಬಗ್ಗೆ ಮಾತನಾಡಿದೆ. ಕನ್ನಡ ಹಾಗೂ ಸಂಸ್ಕೃತಿ, ಇಂಧನ ಸಚಿವ ಸುನಿಲ್‌ ಕುಮಾರ್‌ ಈ ವಿವಾದದ ಬಗ್ಗೆ ಟ್ವೀಟ್‌ ಮಾಡಿದ್ದು, ಹಾಗೇನಾದರೂ ಅಪಮಾನವಾಗುವಂಥ ಅಂಶಗಳಿದ್ದರೆ ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿದ್ದಾರೆ.


'ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ಧನಂಜಯ  (Dhananjaya) ಕೂಡ ಈ ಕುರಿತಾಗಿ ಟ್ವೀಟ್‌ ಮಾಡಿದ್ದು, 'ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ' ಎಂದು ಯೂಟ್ಯೂಬ್‌ ಲಿಂಕ್‌ಅನ್ನು ತಮ್ಮ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಕಳೆದ ತಿಂಗಳು ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಕಾಂತಾರ (Kantara) ಚಿತ್ರದ ವಿಚಾರದಲ್ಲಿಯೂ ವಿವಾದ ಎದುರಾಗಿತ್ತು. ಆ ವಿವಾದ ತಣ್ಣಗಾಗುವ ಮೊದಲೇ ಹೆಡ್‌ಬುಷ್‌ ಚಿತ್ರ ವಿವಾದಕ್ಕೆ ಈಡಾಗಿದೆ. 

ಹೆಡ್‌ ಬುಷ್ ನೈಜ ಘಟನೆಯೇ?: ಡಾಲಿ ಧನಂಜಯ್‌ಗೆ ಬಂದಿತ್ತಾ ಜೀವ ಬೆದರಿಕೆ?

ಹೆಡ್ ಬುಷ್ (Head Bush) 1970 ಮತ್ತು 80 ರ ದಶಕದಲ್ಲಿ ಬೆಂಗಳೂರು ಭೂಗತ (Bengaluru underworld ) ಜಗತ್ತಿನ ಕುರಿತು ಅಗ್ನಿ ಶ್ರೀಧರ್ (Agni Sridhar)  ಬರೆದ ದಾದಾಗಿರಿಯ ದಿನಗಳು (ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್) ಪುಸ್ತಕವನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದ ಕೆಲವು ದೃಶ್ಯಗಳು ಮತ್ತು ಕೆಲವು ಜಾನಪದ ಕಲಾ ಪ್ರಕಾರಗಳ ಪ್ರಾತಿನಿಧ್ಯದ ಬಗ್ಗೆ ಪ್ರೇಕ್ಷಕರ ಒಂದು ವರ್ಗ ಆಕ್ಷೇಪಣೆಯನ್ನು ಎತ್ತಿದರೆ, ಮತ್ತೊಬ್ಬರು ನಾಯಕ ನಟ ಧನಂಜಯ ಅವರ ರಾಜಕೀಯ ದೃಷ್ಟಿಕೋನಗಳಿಗೆ ಚಲನಚಿತ್ರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವಾದ ಮಾಡಿದ್ದಾರೆ. ಧನಂಜಯ ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಪ್ರಗತಿಪರ ನಿಲುವುಗಳಿಗೆ ಹೆಸರುವಾಸಿಯಾಗಿದ್ದಾರೆ.

ಡಾನ್ ಜಯರಾಜ್ ಕ್ರೇಜ್ ಸೃಷ್ಟಿ: ಹೆಡ್ ಬುಷ್ ಮೊದಲ ದಿನದ ಕಲೆಕ್ಷನ್ ಎಷ್ಟು?

ಕೆಲವು ಬಲಪಂಥೀಯ ಗುಂಪುಗಳು ಜಾನಪದ ಕಲಾ ಪ್ರಕಾರ 'ವೀರಗಾಸೆ' ಯನ್ನು ಚಿತ್ರಿಸಿರುವ ರೀತಿ ಸರಿಯಲ್ಲ. ಚಲನಚಿತ್ರವನ್ನು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದವು. ಬೆಂಗಳೂರಿನಲ್ಲಿ ಆಚರಿಸಲಾಗುವ ಪ್ರಸಿದ್ಧ ವಾರ್ಷಿಕ ಉತ್ಸವವಾದ ಕರಗ ಉತ್ಸವದ ಚಿತ್ರಣದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸುವುದಾಗಿ ಕರಗ ಉತ್ಸವ ಸಮಿತಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಕೆಲವು ದೃಶ್ಯಗಳನ್ನು ಕಟ್ ಮಾಡಿ ಸಿನಿಮಾವನ್ನು ಮರು ಬಿಡುಗಡೆ ಮಾಡಬೇಕೆಂಬ ಬೇಡಿಕೆಯೂ ಬಂದಿದೆ.

Follow Us:
Download App:
  • android
  • ios