ಬೆಂಗಳೂರು [ನ.05]:  ರೈತರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳೆ ಸಾಲಮನ್ನಾ ಸಹಾಯವಾಣಿ ಪ್ರಾರಂಭಿಸಿದ್ದು, ಬೆಳೆ ಸಾಲಮನ್ನಾ ಯೋಜನೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಜೆ.ಪಿ.ನಗರದ ತಮ್ಮ ನಿವಾಸದಿಂದಲೇ ಸಹಾಯವಾಣಿ ಮೂಲಕ ರೈತರಿಗೆ ಬೆಳೆಸಾಲ ಮನ್ನಾ ಮಾಹಿತಿ ಒದಗಿಸಲಿದ್ದಾರೆ. ಸಹಾಯವಾಣಿ ಮೊ.ಸಂ.9164305868 ಆರಂಭಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಈ ಅವಧಿಯಲ್ಲಿ ರೈತರು ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾ ವಿಚಾರಕ್ಕೆ ಸಂಬಂಧ ಮಾಹಿತಿ ಪಡೆದುಕೊಳ್ಳಬಹುದು ಎಂದು ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಪ್ರತಿನಿತ್ಯ ನೂರಾರು ರೈತರು ತಮ್ಮ ಬೆಳೆ ಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ರಾಜ್ಯದ ದೂರದ ಊರಿನಿಂದ ಬರುವ ರೈತರಿಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಬೆಂಗಳೂರಿಗೆ ಬರುವ ಬದಲು ರೈತರು ತಮ್ಮ ಊರಿನಿಂದಲೇ ಸಹಾಯವಾಣಿಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿ ಸಾಲಮನ್ನಾದ ವಿವರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

HDK ಒಳ್ಳೆಯವರು ಎನ್ನುತ್ತ ದೊಡ್ಡಗೌಡರಿಗೆ ಸೋಮಣ್ಣ ಪಾಠ!..

ಮೈತ್ರಿ ಸರ್ಕಾರ ಅವಧಿಯಲ್ಲಿ ಕುಮಾರಸ್ವಾಮಿ ರೈತರ ಬೆಳೆ ಸಾಲಮನ್ನಾ ಮಾಡಿದ್ದು, ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮತ್ತು ರೈತರ ಓಲೈಕೆಗೆ ಇಂತಹ ಯೋಚನೆ ಮಾಡಿದ್ದಾರೆ. ರಾಜ್ಯದಲ್ಲಿ ಬೆಳೆ ಸಾಲಮನ್ನಾ ಪಡೆದ ರೈತರ ದೂರವಾಣಿ ಸಹಿತ ಮಾಹಿತಿಯನ್ನು ಕಲೆ ಹಾಕಲು ಇದು ಸಹಕಾರಿಯಾಗಲಿದೆ. ತಾಲೂಕು ಮತ್ತು ಜಿಲ್ಲಾವಾರು ಸಾಲಮನ್ನಾ ಪಡೆದ ರೈತರ ಮಾಹಿತಿ ಪಡೆದು ಸ್ಥಳೀಯ ನಾಯಕರು ಅವರನ್ನು ಸಂಪರ್ಕಿಸಿ ಮನ ಗೆಲ್ಲುವ ಪ್ರಯತ್ನ ಇದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.