ಬೆಂಗಳೂರು, (ಡಿ.20): ಬಿಡದಿ ಟೊಯೋಟಾ ಕಿರ್ಲೋಸ್ಕರ್ ಘಟಕದ ಸಮಸ್ಯೆಗೆ ಕಾರ್ಖಾನೆಯಲ್ಲಿರುವ ಹೊರ ರಾಜ್ಯದ ವ್ಯವಸ್ಥಾಪನ ವರ್ಗವೇ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಷ್ಕರ ಆರಂಭಗೊಂಡು 2 ತಿಂಗಳಾದರೂ ಪರಿಹಾರ ಕಾಣಿಸುತ್ತಿಲ್ಲ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ವ್ಯವಸ್ಥಾಪಕರ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ರಾಜ್ಯದ ಕೈಗಾರಿಕೆ ಬೆಳವಣಿಗೆಯ ದೃಷ್ಟಿಯಿಂದ ತಕ್ಷಣವೇ ಈ ಸಮಸ್ಯೆಗೆ ಅಂತ್ಯ ಹಾಡುವುದು ತುರ್ತ ಅಗತ್ಯ ಎಂದು ತಿಳಿಸಿದರು.

ಜೆಡಿಎಸ್, ಕಾಂಗ್ರೆಸ್ ಲೀಡರ್ಸ್ ಜಂಟಿ ಸುದ್ದಿಗೋಷ್ಠಿ: ಕುಮಾರಸ್ವಾಮಿಗೆ ಸೆಡ್ಡು ಹೊಡೆದ ನಾಯಕ

ವ್ಯವಸ್ಥಾಪಕರ ಮಾತು ಕೇಳಿಯೋ, ಕಾರ್ಮಿಕರ ಮೇಲಿನ ಕ್ಷುಲ್ಲಕ ಆರೋಪಗಳಿಗೋ ಸಂಸ್ಥೆ 3000 ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ನಮ್ಮ ನೆಲ, ಜಲ, ಗಾಳಿ, ಸೌಕರ್ಯ ಬಳಸಿಕೊಂಡು ನಡೆಯುತ್ತಿರುವ ಸಂಸ್ಥೆಗಳೂ ನಮ್ಮವರ ವಿಷಯದಲ್ಲಿ ಇಷ್ಟು ಕ್ರೂರವಾಗಿರುವುದು ಸರಿಯಲ್ಲ. ಸಂಸ್ಥೆ ಮುಖ್ಯಸ್ಥರು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸ್ವತಃ ನಾನೇ ಹಲವು ಸಭೆಗಳನ್ನು ನಡೆಸಿದ್ದೇನೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವೆ ಇರುವ ವ್ಯವಸ್ಥಾಪಕ ವರ್ಗ ಗೊಂದಲ ಸೃಷ್ಟಿ ಮಾಡುತ್ತಿರುವುದು ನನಗೆ ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವ್ಯವಸ್ಥಾಪಕ ವರ್ಗ ಸಾಮಾನ್ಯವಾಗಿ ಈ ಪ್ರದೇಶ, ಪ್ರಾಂತ್ಯದವರಾಗಲಿ, ರಾಜ್ಯದವರಾಗಲಿ ಅಲ್ಲ ಎಂಬುದು ಗಮನಾರ್ಹ ಎಂದು ಹೇಳಿದರು.