ತುಮಕೂರು, (ಡಿ.20): ಅತ್ತ ಎಚ್‌ಡಿ ಕುಮಾರಸ್ವಾಮಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ರೆ, ಇತ್ತ ಜೆಡಿಎಸ್‌ ಶಾಸಕರೊಬ್ಬರು ಕಾಂಗ್ರೆಸ್ ನಾಯಕನ ಜೊತೆ ಸುದ್ದಿಗೋಷ್ಠಿ ನಡೆಸುವ ಮೂಲಕ ಸೆಡ್ಡು ಹೊಡೆದಿದ್ದಾರೆ.

ಹೌದು...ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

ಅಷ್ಟೇ ಅಲ್ಲದೇ ಬಿಜೆಪಿ ಸರಕಾರ ಬೀಳಲು ಬಿಡಲ್ಲ ಎಂದು ನಮ್ಮ ನಾಯಕರೇ ಹೇಳಿದ್ದಾರೆ. ಇನ್ನು 2.5ವರ್ಷ ಸರಕಾರ ಬೀಳಲ್ಲ, ಮಧ್ಯಂತರ ಚುನಾವಣೆ ಬರಲ್ಲ. ಆದರೆ, ಬಿಜೆಪಿಗೆ ನನ್ನ ಬೆಂಬಲವಿಲ್ಲ‌. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯರವನ್ನೇ ಕೇಳಬೇಕು. ಜೆಡಿಎಸ್ -ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಾನು ಬಿಜೆಪಿ ಜೊತೆ ಹೋಗಲ್ಲ ಅದಕ್ಕೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದರು.

ಸಿದ್ದರಾಮಯ್ಯನ ಸೋಲಿಸಬೇಕೆಂದು ಒಳ ಒಪ್ಪಂದವಾಗಿತ್ತು: ಜೆಡಿಎಸ್ ಶಾಸಕ ಬಾಂಬ್

ಇನ್ನು ಕೆ,ಎನ್. ರಾಜಣ್ಣ ಮಾತನಾಡಿ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಳ ಒಪ್ಪಂದದ ನಂ.1 ಪ್ರಿನ್ಸಿಪಾಲ್. ಒಳಸಂಚು ಮಾಡುವುದರಲ್ಲಿಎತ್ತಿದಕೈ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಸಿದ್ಧರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಬರುವವರು‌ ಇದ್ದಾರೆ, ಕಾಂಗ್ರೆಸಿಂದ ಹೋಗುವವರೂ‌ ಇದ್ದಾರೆ ಎಂದು ಕೆ.ಎನ್. ರಾಜಣ್ಣ ಹೇಳಿದರು.

2013 ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋತಿದ್ದರು. ಆಗ ಜನ ಬದಲಾವಣೆ ಬಯಸಿ ಮತ್ತೊಬ್ಬರಿಗೆ ಅವಕಾಶ ಕೊಟ್ಟಿದ್ದರು ಅಷ್ಟೇ. ಈ ಬಾರಿ ಪರಮೇಶ್ವರ್ ಗೆದ್ದಿದ್ದಾರೆ, ಕುಮಾರಸ್ವಾಮಿ ಬಂದು ಗೆಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು.

ಬಸವರಾಜ್‌ಗೆ ಬೆಂಬಲ ನೀಡಿದ್ದೆವು ಎಂದ ರಾಜಣ್ಣ
ದೇವೇಗೌಡರ ಋಣ ತೀರಿಸುವ ಆಸೆ ಇತ್ತು. ಆದರೆ ಚುನಾವಣೆಗೆ ನಿಂತಾಗ ಒಮ್ಮೆ ಮನೆಗೆ ಬಂದು ಮಾತಾಡಿಲ್ಲ, ಕೊನೇ ಪಕ್ಷ ಕರೆ ಮಾಡಿ ಕರೆದಿದ್ದರೂ ಅವರು ಇದ್ದಲ್ಲಿಗೆ ಹೋಗಿ ಮಾತನಾಡುತ್ತಿದ್ದೆ. ಅವರೇ ವೋಟ್ ಕೇಳದಿದ್ದಾಗ ಯಾರಿಗೆ ವೋಟ್ ಹಾಕೋದು? ಅವರು ಮನೆಗೆ ಬಂದು ಕೇಳಿದ್ದರು. ಹಾಗಾಗಿ ಬಸವರಾಜ್ ಗೆ ಬೆಂಬಲ ನೀಡಿದ್ದೆವು. ಬಸವರಾಜ್ ಗೆ ಬೆಂಬಲ ನೀಡಿದ್ದೆವೆಯೇ ಹೊರತು ಬಿಜೆಪಿಗೆ ಅಲ್ಲ ಎಂದರು.