ಬೆಂಗಳೂರು : ಒಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ವಾಕ್ಸಮರ ಮುಂದುವರೆದಿರುವಾಗಲೇ, ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಜೆಡಿಎಸ್ ತ್ರಿಕೋನ ಸ್ಪರ್ಧೆಗೂ ಸಿದ್ಧವಿದೆ ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಸ 
ಬಾಂಬ್ ಸಿಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಿದ್ದೇವೆ. ಹಾಸನ ಕ್ಷೇತ್ರದಲ್ಲಿ ದೇವೇಗೌಡರು ತಾವೇ ಸ್ಪರ್ಧಿಸುತ್ತಾರೋ, ಪ್ರಜ್ವಲ್ ಅವರನ್ನು ನಿಲ್ಲಿಸುತ್ತಾರೋ ಅಥವಾ ಕಾಂಗ್ರೆಸಿನವರಿಗೆ ಅವಕಾಶ ನೀಡುತ್ತಾರೋ ಗೊತ್ತಿಲ್ಲ. ಯಾರನ್ನೇ ನಿಲ್ಲಿಸಿದರೂ 
ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಸ್ಪಷ್ಪಡಿಸಿದರು.

ಒಂದು ವೇಳೆ ತ್ರಿಕೋನ ಸ್ಪರ್ಧೆಯ ಚುನಾವಣೆ ನಡೆಸಲು ನಿರ್ಧರಿಸಿದರೆ ಅದಕ್ಕೂ ಸಿದ್ಧವಿದ್ದೇವೆ. ಆದರೆ, ಇದನ್ನು ದೇವೇಗೌಡರು ಅಂತಿಮ  ನಿರ್ಧಾರ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಹಾಸನದಿಂದ ದೇವೇಗೌಡರೇ ನಿಂತರೆ ಭಾರೀ ಅಂತರದಿಂದ ಗೆಲ್ಲಿಸುತ್ತೇವೆ ಎಂದರು.