Asianet Suvarna News Asianet Suvarna News

ಆಪ್ತನೊಂದಿಗೆ ಮುನಿಸು ಮರೆತು ಒಂದಾದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಇದೀಗ ಮತ್ತೊಮ್ಮೆ ಮುನಿಸು ಮರೆತು ಒಂದಾಗಿದ್ದಾರೆ. ಇಬ್ಬರೂ ಕೂಡ ಭೇಟಿ ಮಾಡಿದ್ದು ಇದು ಹಳೆಯ ಸ್ನೇಹಿತರ ನಡುವಿನ ಮುನಿಸು ಕರಗಿದ ಸಂಕೇತ ಎಂದೇ ಕಾಂಗ್ರೆಸ್‌ ವಲಯದಲ್ಲಿ ಬಿಂಬಿಸಲಾಗುತ್ತಿದೆ.

HC Mahadevappa Meets Siddaramaiah
Author
Bengaluru, First Published Oct 6, 2018, 10:04 AM IST
  • Facebook
  • Twitter
  • Whatsapp

ಬೆಂಗಳೂರು :  ಸುದೀರ್ಘ ಕಾಲದ ನಂತರ ಮಾಜಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದು ಹಳೆಯ ಸ್ನೇಹಿತರ ನಡುವಿನ ಮುನಿಸು ಕರಗಿದ ಸಂಕೇತ ಎಂದೇ ಕಾಂಗ್ರೆಸ್‌ ವಲಯದಲ್ಲಿ ಬಿಂಬಿಸಲಾಗುತ್ತಿದೆ.

ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಮಹದೇವಪ್ಪ ಕೆಲ ಮಾತನಾಡಿದರು. ಅಲ್ಲದೆ, ಇಬ್ಬರು ನಾಯಕರು ಆಸ್ಪತ್ರೆಯಿಂದ ಸಿದ್ದರಾಮಯ್ಯ ನಿವಾಸದವರೆಗೂ ಒಂದೇ ಕಾರಿನಲ್ಲಿ ಸಂಚಾರ ಕೂಡ ಮಾಡಿದರು.

ಮೂರು ದಶಕಗಳ ಸ್ನೇಹಿತರಾದ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರು ಕಳೆದ ವಿಧಾನಸಭೆ ಚುನಾವಣೆ ನಂತರ ಪರಸ್ಪರ ಅಂತರ ಕಾಯ್ದುಕೊಂಡಿದ್ದರು. ಇದಾದ ನಂತರ ಶುಕ್ರವಾರದ್ದು ಸೇರಿದಂತೆ ಅವರು ಮುಖಾಮುಖಿಯಾಗಿದ್ದು ಮೂರು ಬಾರಿ ಮಾತ್ರ. ಕಳೆದ ವಿಧಾನಸಭಾ ಚುನಾವಣೆ ವೇಳೆ ತಮ್ಮ ಆಪ್ತರಾದ ಹಾಗೂ ತಮ್ಮ ಸಂಪುಟದಲ್ಲಿ ಐದು ವರ್ಷಗಳ ಅವಧಿಗೆ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಅವರಿಗೆ ಹಳೆ ಮೈಸೂರು ಭಾಗದ ಐದು ಜಿಲ್ಲೆಗಳ ಉಸ್ತುವಾರಿಯನ್ನು ಹಾಗೂ ಈ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸಂಪನ್ಮೂಲ ಕ್ರೋಡೀಕರಿಸಿ ನೀಡುವ ಹೊಣೆಯನ್ನು ಸಿದ್ದರಾಮಯ್ಯ ನೀಡಿದ್ದರು.

ಆದರೆ, ಚುನಾವಣೆ ವೇಳೆ ಮಹದೇವಪ್ಪ, ವಹಿಸಿದ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ ಎಂಬ ಸಿಟ್ಟು ಸಿದ್ದರಾಮಯ್ಯ ಅವರಿಗೆ ಇದೆ. ಮಹದೇವಪ್ಪ ತಮ್ಮ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದರೆ ಕಾಂಗ್ರೆಸ್‌ ಬಹುಮತದ ಸಮೀಪವಿರುತ್ತಿತ್ತು ಎಂಬುದು ಸಿದ್ದರಾಮಯ್ಯ ಅವರ ಭಾವನೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಇನ್ನು ಮಹದೇವಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರನಿಂದ ತಾವು ಸ್ಪರ್ಧಿಸಿ ತಮ್ಮ ಸ್ವಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಡುವ ಉಮೇದಿ ಇತ್ತು. ಆದರೆ, ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ನಿರಾಕರಿಸಲಾಯಿತು ಮತ್ತು ಮಹದೇವಪ್ಪಗೆ ಸ್ವಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮಾಡಲಾಗಿತ್ತು. ಸಿದ್ದರಾಮಯ್ಯ ಬಯಸಿದ್ದರೆ ತಮ್ಮ ಪುತ್ರ ಹಾಗೂ ತಮಗೆ ಇಬ್ಬರಿಗೂ ಟಿಕೆಟ್‌ ಕೊಡಿಸಬಹುದಿತ್ತು ಎಂಬ ಬೇಸರ ಮಹದೇವಪ್ಪ ಅವರಿಗೂ ಇತ್ತು. ಹೀಗಾಗಿಯೇ ಚುನಾವಣೆಯಲ್ಲಿ ಅವರು ತಟಸ್ಥರಾದರು ಎನ್ನಲಾಗುತ್ತದೆ.

ಈ ಮನಸ್ತಾಪದಿಂದಾಗಿ, ಸದಾ ಜತೆಗಿರುತ್ತಿದ್ದ ಹಾಗೂ ಪ್ರಮುಖ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಳ್ಳುತ್ತಿದ್ದ ಈ ನಾಯಕರು ಚುನಾವಣೆ ನಂತರ ಹೆಚ್ಚು ಭೇಟಿಯಾಗಿರಲಿಲ್ಲ. ಒಂದು ಹಂತದಲ್ಲಂತೂ ಮಹದೇವಪ್ಪ ಅವರು ಕಾಂಗ್ರೆಸ್‌ ತ್ಯಜಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಹಳೆ ಸ್ನೇಹ ಮತ್ತೆ ಚಿಗುರಿತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Follow Us:
Download App:
  • android
  • ios