ಬೆಂಗಳೂರು (ಏ.18):  ಸ್ವಾತಂತ್ರ್ಯಪೂರ್ವದಲ್ಲೇ ಸಂಸ್ಥಾಪನೆಯಾಗಿರುವ 78 ವರ್ಷಗಳ ಇತಿಹಾಸ ಹೊಂದಿರುವ ‘ಶ್ರೀ ಅಖಿಲ ಹವ್ಯಕ ಮಹಾಸಭೆ’ಗೆ ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಗಾಗಿ ‘ಐಎಸ್‌ಒ 9001:2015’ ಪ್ರಮಾಣ ಪತ್ರಕ್ಕೆ ಭಾಜನವಾಗಿದೆ. 

ಪ್ರಮಾಣ ಪತ್ರ ದೊರೆತಿರುವುದು ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಮಹಾಸಭೆಗೆ ಶಿಸ್ತು ಬದ್ಧ ಹಾಗೂ ಅಭಿವೃದ್ಧಿಪರ ಆಡಳಿತಕ್ಕೆ ಕೈಗನ್ನಡಿಯಾಗಿದೆ ಎಂದು ಮಹಾಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಹವ್ಯಕ ಮಹಾಸಭೆಯ ಆಡಳಿತ ನಿರ್ವಹಣೆ, ಸಮಾಜದ ಉನ್ನತಿಗಾಗಿ ಕೈಗೊಂಡಿರುವ ಕಾರ್ಯಗಳು ಸೇರಿದಂತೆ ಹಣಕಾಸು ನಿರ್ವಹಣೆ, ಆಡಳಿತ ಹಾಗೂ ಒಟ್ಟಾರೆ ಸಮಗ್ರ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿದ್ದು, ಎಲ್ಲ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು ‘ಐಎಸ್‌ಒ 9001:2015 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಪ್ರಮಾಣ ಪತ್ರ ನೀಡಲಾಗಿದೆ ಎಂದು ಮಹಾಸಭಾ ಹರ್ಷ ವ್ಯಕ್ತಪಡಿಸಿದೆ.

ಎಲ್ಲರ ಏಳ್ಗೆಗೆ ಹವ್ಯಕ ಮಹಾಸಭೆ ಕಾರ್ಯಕ್ರಮ: ಡಾ. ಗಿರಿಧರ ಕಜೆ ...

ಹವ್ಯಕ ಸಮಾಜ ಶಿಸ್ತಿಗೆ ಹೆಸರುವಾಸಿಯಾಗಿದ್ದು, ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಮಹಾಸಭೆಗೆ ಅದರ ದಕ್ಷ ನಿರ್ವಹಣೆಗಾಗಿ ಈ ಪ್ರಮಾಣ ಪತ್ರ ಸಿಕ್ಕಿರುವುದು ವಿಶೇಷವಾಗಿದೆ ಎಂದು ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಲಾಗಿದೆ.

ಮಹಾಸಭಾ ಬಡವರ ಕಲ್ಯಾಣ, ಹವ್ಯಕ ಸಮುದಾಯ ಅಭಿವೃದ್ಧಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವ ಹಾಸ್ಟೆಲ್‌ ಸೇವೆ, ವಿದ್ಯಾರ್ಥಿ ವೇತನ ಮತ್ತಿತರ ಯೋಜನೆಗಳ ಮೂಲಕ ಉತ್ತಮ ಸೇವೆ ಒದಗಿಸುವ ಸಾಮಾಜಿಕ ಸಂಸ್ಥೆಯಾಗಿ ಖ್ಯಾತಿ ಪಡೆದಿದೆ.

 ISO 9001:2015 ಬಗ್ಗೆ ಒಂದಿಷ್ಟು 

* ಸಂಸ್ಥೆ ಅಥವಾ ವ್ಯಕ್ತಿಗಳು ತಮ್ಮ ಹಣಕಾಸು ನಿರ್ವಹಣೆ, ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಸುಸೂತ್ರವಾಗಿ ಒಂದು ಚೌಕಟ್ಟಿನೊಳಗೆ ರೂಢಿಸಿಕೊಂಡಿರುವುದನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ. 

* ನಿತ್ಯ ವ್ಯವಹಾರಗಳನ್ನು ನಿಗದಿತ ಗುಣಮಟ್ಟದಲ್ಲಿ ಒಂದು ಚೌಕಟ್ಟಿನೊಳಗೆ ನಿರ್ವಹಿಸುವುದನ್ನು ಖಾತರಿ ಪಡಿಸುವುದು ಮತ್ತು ಅದನ್ನು ಎಲ್ಲ ರೀತಿಯಲ್ಲೂ ಸುಧಾರಿಸುವ ಕೆಲಸವನ್ನು ಹಂತ ಹಂತವಾಗಿ ನಿರಂತರವಾಗಿ ಮಾಡುವುದು. 

* ಪ್ರಮಾಣೀಕರಿಸುವ ಕೆಲಸವನ್ನು ತೃತೀಯ ಸಂಸ್ಥೆಯೊಂದು ಮಾಡುವುದಾಗಿದ್ದು, ಅದು ಹಣಕಾಸು ನಿರ್ವಹಣೆ, ಆಡಳಿತ ಹಾಗೂ ಒಟ್ಟಾರೆ ವ್ಯವಸ್ಥೆಯ ಗುಣಮಟ್ಟದ ಮೌಲ್ಯಮಾಪನ ಮಾಡಿ ಬಳಿಕವಷ್ಟೇ ಪ್ರಮಾಣಪತ್ರ ಒದಗಿಸಲು ಶಿಫಾರಸು ಮಾಡುತ್ತದೆ.