ಬೆಂಗಳೂರು(ಏ.05):  ಹವ್ಯಕ ಮಹಾಸಭಾ ಎಂಬುದು ಜಾತಿ ಸಂಕೇತವಾಗಿದ್ದರೂ, ಎಲ್ಲ ಸಮುದಾಯಗಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.

ಭಾನುವಾರ ಅಖಿಲ ಹವ್ಯಕ ಮಹಾಸಭಾದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾಸಭಾದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಮತ್ತು ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹವ್ಯಕ ಮಹಾಸಭಾದಿಂದ ಕೇವಲ ಹವ್ಯಕ ಸಮುದಾಯಕ್ಕಾಗಿ ಅಗತ್ಯವಿರುವ ಚಟುವಟಿಕೆಗಳನ್ನು ಆಯೋಜಿಸುತ್ತಿಲ್ಲ. ಸಮಾಜದಲ್ಲಿನ ಎಲ್ಲ ಸಮುದಾಯದವರ ಏಳ್ಗೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹವ್ಯಕ ಮಹಾಸಭಾದಿಂದ ಬ್ರಾಹ್ಮಣೇತರರಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ವಿಶ್ವ ಹವ್ಯಕ ಸಮ್ಮೇಳನದಲ್ಲಿ ದಲಿತರು, ಮುಸ್ಲಿಂ ಸಮುದಾಯದವರಿಗಾಗಿ ವಿಶೇಷ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.

ಇಡೀ ವಿಶ್ವದಲ್ಲಿ ಕೇವಲ ನಾಲ್ಕು ಲಕ್ಷ ಜನರಿರುವ ಹವ್ಯಕ ಸಮಾಜದಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಿದ್ದು ಪ್ರತಿಭಾವಂತರಾಗಿದ್ದಾರೆ. ಅವರುಗಳಲ್ಲಿ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಎಲ್ಲ ಕೇಂದ್ರಗಳಲ್ಲಿಯೂ ಗಾಯತ್ರಿ ಮಹೋತ್ಸವ; ಡಾ. ಗಿರಿಧರ್ ಕಜೆ

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಗುರುಮೂರ್ತಿ ಮಾತನಾಡಿ, ಹವ್ಯಕ ಸಮುದಾಯ ಸಮಾಜಕ್ಕೆ ಅನೇಕ ಗಣ್ಯರನ್ನು ನೀಡಿದೆ. ಇಡೀ ದೇಶದಲ್ಲಿ ನಮ್ಮವರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ರಾಮಕೃಷ್ಣ ಹೆಗಡೆಯವರು ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಮೂಲಕ ಆದರ್ಶ ರಾಜಕಾರಣ ಮಾಡಿದ್ದರು. ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ನಮಗೆ ಹೆಮ್ಮೆಯ ವಿಚಾರ. ಇಂದು ರಾಷ್ಟ್ರ ಸೇವೆಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿರುವ ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಅವರೂ ನಮ್ಮ ಸಮುದಾಯದವರು ಎನ್ನಲು ಹೆಮ್ಮೆಯಾಗುತ್ತದೆ ಎಂದರು.

ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್‌ ಭಟ್‌, ವೇದ ವಿದ್ವಾಂಸ ವಿದ್ವಾನ್‌ ಎಸ್‌.ಶಂಭು ಭಟ್ಟ ಕಡತೋಕ, ಸಂಸ್ಥಾಪನೋತ್ಸವ ಸಮಿತಿಯ ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ, ಹವ್ಯಕ ವಿಶೇಷ ಪ್ರಶಸ್ತಿ ಸಂಚಾಲಕ ರವಿನಾರಾಯಣ ಪಟ್ಟಾಜೆ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ ಸೇರಿದಂತೆ ಮತ್ತಿತರರು ಇದ್ದರು.

‘ಸಂಪ್ರದಾಯ ಕೈಬಿಡದ ಹವ್ಯಕ ಯುವಕರು’

ಪ್ರಶಸ್ತಿ ಪುರಸ್ಕೃತರು 2020ನೇ ಸಾಲು

ಹವ್ಯಕ ವಿಭೂಷಣ- ಡಾ.ವಿದ್ವಾನ್‌ ಬಂದಗದ್ದೆ ನಾಗರಾಜ (ಸಾಹಿತ್ಯ). ಹವ್ಯಕ ಭೂಷಣ- ರಾಮಚಂದ್ರ ಹೆಗಡೆ ಕೊಂಡದ ಕುಳಿ(ಯಕ್ಷಗಾನ) ಮತ್ತು ಡಾ.ಶ್ಯಾಮ್‌ ಸಿ.ಭಟ್‌(ಸಂಶೋಧನೆ). ಹವ್ಯಕ ಶ್ರೀ ಪ್ರಶಸ್ತಿ- ವೇ.ಮೂ. ಗಜಾನನ ಘನಪಾಠಿ(ವೇದ), ತೇಜಸ್ವಿ ಶಂಕರ್‌(ಮನೋರಂಜನೆ) ಮತ್ತು ಗುರುಮೂರ್ತಿ ವೈದ್ಯ (ಸಂಗೀತ).

2021ನೇ ಸಾಲು

ಹವ್ಯಕ ವಿಭೂಷಣ- ಡಾ. ನಾ.ಮೊಗಸಾಲೆ (ಸಾಹಿತ್ಯ). ಹವ್ಯಕ ಭೂಷಣ- ಡಾ.ಎಚ್‌.ಎಲ್‌. ಸುಬ್ಬರಾವ್‌(ವೈದ್ಯಕೀಯ) ಮತ್ತು ಡಾ. ನಾಗರಾಜ ಹೆಗಡೆ ಗೊರನಮನೆ (ಕೃಷಿ ಉಪಕರಣ/ಔಷಧ). ಹವ್ಯಕ ಶ್ರೀ ಪ್ರಶಸ್ತಿ- ಚಂದ್ರಕಲಾ ವಿ. ಭಟ್‌(ಸಮಾಜಸೇವೆ, ತಾಳ ಮದ್ದಳೆ), ಲಕ್ಷ್ಮೀ ನಾರಾಯಣ ಹೆಗಡೆ, ಕಲ್ಲಬ್ಬೆ(ಪರಿಸರ) ಮತ್ತು ಕು. ಈಶಾ ಶರ್ಮ ಕಾಂತಜೆ (ಕ್ರೀಡೆ).