ವಿದೇಶದಿಂದ ಬರುವ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಕೆ; ತಿರಸ್ಕರಿಸಿದ ಕೋರ್ಟ್
ಅತ್ಯಾಚಾರ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಬರುವ ಮುನ್ನವೇ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದೆ.
ಬೆಂಗಳೂರು (ಮೇ 29): ಹಾಸನದ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದುಕೊಂಡೇ ಮೇ 31ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ ಬೆನ್ನಲ್ಲಿಯೇ ಎಸ್‌ಐಟಿ ಪೊಲೀಸರ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಅರ್ಜಿ ತಿರಸ್ಕರಿಸಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿಕೆ ಮಾಡಿದೆ.
ಇಡೀ ದೇಶದಾದ್ಯಂತ ಭಾರಿ ಚರ್ಚೆಗೆ ಒಳಗಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ 2,900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ವೈರಲ್ ಆದ ಬೆನ್ನಲ್ಲಿಯೇ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಲೋಕಸಭಾ ಚುನಾವಣೆ ಮತದಾನ ಮಾಡಿದ ನಂತರ ವಿದೇಶಕ್ಕೆ ತೆರಳಿದ್ದ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನ ಭಯದಿಂದಾಗಿ ವಿಚಾರಣೆಗೆ ಹಾಜರಾಗದೇ ಕಳೆದೊಂದು ತಿಂಗಳಿಂದ ವಿದೇಶದಲ್ಲಿಯೇ ನೆಲೆಸಿದ್ದಾರೆ. ಆದರೆ, ಮೇ 31ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಮೂಲಕ ಪ್ರಜ್ವಲ್ ಮಾಹಿತಿ ನೀಡಿದ್ದು, ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಿರೀಕ್ಷಣಾ ಜಾಮೀನು ಕೋಡಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮೇ 31ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
Big Breaking: ಹಾಸನ ಅಶ್ಲೀಲ ವಿಡಿಯೋ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ದೊಡ್ಡ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿತ್ತ. ಆದರೆ, ಇದರಲ್ಲಿ ಆರೋಪಿಯ ಮುಖ ಕಾಣಿಸಿಲ್ಲ. ಎಲ್ಲ ವಿಡಿಯೋಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನೇ ವಿಡಿಯೋ ಮಾಡಲಾಗಿದೆ. ಆದರೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರ ಮಾನಹಾನಿ ಉಂಟಾಗಿದೆ. ಇದರಲ್ಲಿ ಮಹಿಳಾ ಜನಪ್ರತಿನಿಧಿಗಳು, ಮಹಿಳಾ ಅಧಿಕಾರಿಗಳು, ಸರ್ಕಾರಿ ನೌಕರರು, ಮನೆ ಕೆಲಸದವರು, ಸಮಾಜ ಸೇವಕಿಯರು ಸೇರಿ ವಿವಿಧ ಕ್ಷೇತ್ರದ ಮಹಿಳೆಯರಿದ್ದಾರೆಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನ ದಿನವಾದ ಏ.26ರಂದು ಮತದಾನ ಮಾಡಿ ವಿದೇಶಕ್ಕೆ ಹೋಗಿದ್ದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹರಿದಾಡಿದ ಬೆನ್ನಲ್ಲಿಯೇ ಇದರ ತನಿಖೆಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಇನ್ನು ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ಗೆ ನೋಟಿಸ್ ನೀಡದರೆ ಆತ, ವಿದೇಶದಲ್ಲಿದ್ದೇನೆ ಒಂದು ವಾರ ಕಾಲಾವಕಾಶ ಕೊಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಎಸ್‌ಐಟಿ ಪೊಲೀಸರಲ್ಲಿ ಮನವಿ ಮಾಡಿದ್ದನು.
ಇದಾದ ನಂತರ ಲೋಕಸಭಾ ಚುನಾವಣೆ ನಿಮಿತ್ತ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ಕಾಂಗ್ರೆಸ್ ಪ್ರಚಾರದಲ್ಲಿ ಬಳಸಿಕೊಂಡಿದೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ಅವಮಾನ ಉಂಟಾಗಿತ್ತು. ಇನ್ನು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗದ ಪ್ರಜ್ವಲ್ ರೇವಣ್ಣಗೆ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿತ್ತು. ಆದರೂ, ದೇಶಕ್ಕೆ ಬರುವುದಾಗಿ ನಾಲ್ಕು ಬಾರಿ ವಿವಿಧ ದೇಶಗಳಿಂದ ವಿಮಾನ ಟಿಕೆಟ್ ಬುಕಿಂಗ್ ಮಾಡಿ ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ಗೆ ಸಂಸತ್ತಿನಿಂದ ನೀಡಲಾದ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಕೇಂದ್ರ ಸರ್ಕಾರದಿಂದ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ರದ್ದತಿಯಾಗುವ ಭಯದ ಬೆನ್ನಲ್ಲಿಯೇ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದುಕೊಂಡೇ ಕಳೆದೆರಡು ದಿನಗಳ ಹಿಂದ ವಿಡಿಯೋ ಹರಿಬಿಟ್ಟಿ ನಾನು ಶುಕ್ರವಾರ (ಮೇ 31ರಂದು) ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಮ್ಯೂನಿಚ್ ದೇಶದಿಂದ ಮೇ 30ರಂದು ಮಧ್ಯರಾತ್ರಿ 12.30ರ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಈಗ ವಿದೇಶದಿಂದ ಬಂದ ಕೂಡಲೇ ಅವರನ್ನು ಎಸ್‌ಐಟಿ ಬಂಧಿಸುತ್ತದೆ ಎಂದು ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಮೇ 31ರಂದು ಎಸ್‌ಐಟಿ ಪೊಲೀಸರಿಂದ ಬಂಧನವಾಗುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು.