ಹಾಸನ, (ಮೇ.09): ಸಂಸದ ಪ್ರಜ್ವಲ್ ರೇವಣ್ಣ ಅವರು ಆಕ್ಸಿಜನ್, ಬೆಡ್ ಸಮಸ್ಯೆ, ಲಸಿಕೆ ಅಭಾವದ ಬಗ್ಗೆ ತುರ್ತಾಗಿ ಸ್ಪಂದಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸುಮಾರು 50 ಸಾವಿರ ಹೊಸ ಕೇಸುಗಳು ದಾಖಲಾಗುತ್ತಿವೆ. ರಾಜ್ಯದ ಇತರ ಜಿಲ್ಲೆಗಳು ಹಾಟ್ ಸ್ಪಾಟ್ ಆಗುತ್ತಿವೆ. ಈಗಿರುವ ನಮ್ಮ ವೈದ್ಯಕೀಯ ಸೌಕರ್ಯದ ಮೂಲಕ ಕೋವಿಡ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲಎಂದು ಪ್ರಜ್ವಲ್ ರೇವಣ್ಣ ಪತ್ರದಲ್ಲಿ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಸ್ಥಿತಿಯನ್ನು ತಿಳಿಸಿದ್ದಾರೆ.

ಮೋದಿಗೆ ಕುಮಾರಸ್ವಾಮಿ ಪತ್ರ: ರಾಜ್ಯದ ಪರಿಸ್ಥಿತಿ ಬಿಚ್ಚಿಟ್ಟ ಎಚ್‌ಡಿಕೆ

ರಾಜ್ಯದ ಚಾಮರಾಜನಗರ, ಕಲಬುರಗಿ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತ ಪಟ್ಟಿದ್ದಾರೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಲಸಿಕೆಯ ಅಭಾವ ತೀವ್ರವಾಗಿ ಕಾಡುತ್ತಿದೆ. ಸೆಪ್ಟಂಬರ್ ನಲ್ಲಿ ಮೂರನೇ ಅಲೆ ದಾಳಿ ಮಾಡುವ ಮುನ್ನ, ನಾವು ಸಿದ್ದತೆಯನ್ನು ಮಾಡಿಕೊಂಡು ಇರಬೇಕು"ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ನಾನು ಪ್ರತಿನಿಧಿಸುವ ಹಾಸನ ಕ್ಷೇತ್ರದಲ್ಲಿ 22 ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಭರ್ತಿ ಮಾಡಿಕೊಳ್ಳುತ್ತಿದ್ದೇವೆ. 672 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ನಮಗಿದೆ. ಆದರೆ, 460 ಸಿಲಿಂಡರ್ ರಿಫಿಲ್ ಮಾಡುವ ಸಾಮರ್ಥ್ಯ ಮಾತ್ರ ನಮ್ಮಲ್ಲಿದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು"ಎಂದು ಪ್ರಜ್ವಲ್ ಪತ್ರದ ಮೂಲಕ ಹೇಳಿದ್ದಾರೆ. ದಿನವೊಂದಕ್ಕೆ ಎರಡರಿಂದ ಮೂರು ಸಾವಿರ ಹೊಸ ಕೇಸುಗಳು ದಾಖಲಾಗುತ್ತಿವೆ, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. 

ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆಯನ್ನು ಹೆಚ್ಚಿಸಲು ಎಂಟರಿಂದ ಹತ್ತು ಕೋಟಿ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಮಾಡಿದ ಮನವಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಪ್ರಜ್ವಲ್ ರೇವಣ್ಣ ಪತ್ರದಲ್ಲಿ ನಮೂದಿಸಿದ್ದಾರೆ. ಹಾಸನ ಕ್ಷೇತ್ರದವರಾದ ಎಚ್.ಡಿ.ದೇವೇಗೌಡ ಅವರು ಏಪ್ರಿಲ್ 25ನೇ ತಾರೀಕಿನಂದು ವಿಸ್ಕೃತ ಮಾಹಿತಿಯನ್ನು ಪತ್ರದ ಮೂಲಕ ತಮಗೆ ತಿಳಿಸಿದ್ದಾರೆ. ಲಸಿಕೆ ಅಭಿಯಾನವನ್ನು ರಾಷ್ಟ್ರೀಯ ಕಾರ್ಯಕ್ರಮ ಎಂದು ಘೋಷಿಸಿ. ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಮತ್ತು ಆಶಾ ಕಾರ್ಯಕರ್ತರಿಗೆ ವಿಮಾ ಯೋಜನೆ ಘೋಷಿಸಿ ಎನ್ನುವ ಸಲಹೆಯನ್ನು ಪ್ರಜ್ವಲ್ ಪತ್ರದ ಮೂಲಕ ತಿಳಿಸಿದ್ದಾರೆ.