ಯಗಚಿ ನಾಲೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಬಾಕಿ ಪರಿಹಾರ ನೀಡದ ಕಾರಣ, ಹಾಸನ ಜಿಲ್ಲಾಧಿಕಾರಿಗಳ ಅಧಿಕೃತ ಕಾರನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಎರಡು ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶವನ್ನು ಪಾಲಿಸದ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಹಾಸನ (ಜ.10): ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಬರಬೇಕಿದ್ದ ಬಾಕಿ ಪರಿಹಾರ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ, ಹಾಸನ ಜಿಲ್ಲಾಧಿಕಾರಿಗಳ (DC) ಅಧಿಕೃತ ಕಾರನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಯಗಚಿ ನಾಲೆಗಾಗಿ ಜಮೀನು ನೀಡಿದ್ದ ರೈತರಿಗೆ ಸಲ್ಲಬೇಕಿದ್ದ ಸುಮಾರು 11.22 ಲಕ್ಷ ರೂಪಾಯಿಗಳ ಪರಿಹಾರ ವಿಳಂಬವಾದ ಕಾರಣ ಈ ಅನಿವಾರ್ಯ ಕ್ರಮ ಜರುಗಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಆಲೂರು ತಾಲ್ಲೂಕಿನ ಭಕ್ತರವಳ್ಳಿ ಗ್ರಾಮದ ರೈತರಾದ ನಾಗಮ್ಮ, ಲಕ್ಷ್ಮೇಗೌಡ ಮತ್ತು ಜಗದೀಶ್ ಎಂಬುವವರು ಯಗಚಿ ನಾಲೆ ನಿರ್ಮಾಣಕ್ಕಾಗಿ ತಮ್ಮ ಫಲವತ್ತಾದ ಜಮೀನನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಸರ್ಕಾರ ನೀಡಿದ್ದ ಪರಿಹಾರ ಮೊತ್ತ ಅತ್ಯಲ್ಪ ಎಂದು ಭಾವಿಸಿದ ರೈತರು ಸೂಕ್ತ ಪರಿಹಾರಕ್ಕಾಗಿ ಹಾಸನ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೈತರ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯವು, ಬಾಕಿ ಇರುವ 11 ಲಕ್ಷದ 22 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ 2 ವರ್ಷಗಳ ಹಿಂದೆಯೇ ಆದೇಶ ನೀಡಿತ್ತು.

ಪರಿಹಾರ ನೀಡದ ಜಿಲ್ಲಾಡಳಿತ

ಇನ್ನು ಕೋರ್ಟ್ ಆದೇಶ ನೀಡಿ ಎರಡು ವರ್ಷ ಕಳೆದರೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಹಣ ಪಾವತಿಸಿರಲಿಲ್ಲ. ಈ ವಿಳಂಬ ಧೋರಣೆಯನ್ನು ಪ್ರಶ್ನಿಸಿ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳ ಕಾರನ್ನು ಅಟ್ಯಾಚ್ (ಜಪ್ತಿ) ಮಾಡಲು ನ್ಯಾಯಾಲಯ ಆದೇಶ ಹೊರಡಿಸಿತ್ತು.

ಸಂಧಾನ ವಿಫಲ

ನಿನ್ನೆ ಸಂಜೆಯವರೆಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಅರ್ಜಿದಾರರ ಪರ ವಕೀಲರ ನಡುವೆ ಪರಿಹಾರ ಪಾವತಿ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ಅಧಿಕಾರಿಗಳು ಒಟ್ಟು ಮೊತ್ತದ ಶೇ. 25 ರಷ್ಟು ಹಣವನ್ನು ಪಾವತಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ, ರೈತರ ಪರ ವಕೀಲರು ಕನಿಷ್ಠ ಶೇ. 50 ರಷ್ಟು ಹಣವನ್ನು ತಕ್ಷಣವೇ ಪಾವತಿಸಬೇಕು ಎಂದು ಪಟ್ಟು ಹಿಡಿದರು. ಈ ಸಂಧಾನ ಮುರಿದುಬಿದ್ದ ಹಿನ್ನೆಲೆಯಲ್ಲಿ, ಇಂದು ನ್ಯಾಯಾಲಯದ ಸಿಬ್ಬಂದಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಆಗಮಿಸಿ ಕಾರನ್ನು ಜಪ್ತಿ ಮಾಡಿ ಟೋಯಿಂಗ್ ಮೂಲಕ ತೆಗೆದುಕೊಂಡು ಹೋದರು. ಈ ಘಟನೆಯು ಸರ್ಕಾರಿ ಆಡಳಿತ ನಿರ್ಲಕ್ಷ್ಯದ ವಿರುದ್ಧ ರೈತರು ನ್ಯಾಯಾಲಯದ ಮೂಲಕ ಪಡೆದ ಗೆಲುವು ಎಂದು ಬಣ್ಣಿಸಲಾಗುತ್ತಿದೆ.