ಬೆಂಗಳೂರು[ನ.30]: ಮೈತ್ರಿ ಸರ್ಕಾ​ರದ ಅತ್ಯಂತ ಪ್ರಭಾವಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಹಾಸನ ಜಿಲ್ಲಾ ಕಾಂಗ್ರೆಸ್‌ ನಾಯ​ಕರು ಕೆಂಡಾ​ಮಂಡ​ಲ​ಗೊಂಡಿದ್ದು, ಮೈತ್ರಿ ಧರ್ಮ ಮೀರಿ ವೈಯ​ಕ್ತಿಕ ದ್ವೇಷ ಸಾಧನೆ ಮಟ್ಟಕ್ಕೆ ಇಳಿ​ದಿ​ರುವ ರೇವಣ್ಣ ಅವ​ರಿಗೆ ಮೂಗು​ದಾರ ಹಾಕಲು ಮುಖ್ಯಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಮೇಲೆ ಒತ್ತಡ ತರು​ವಂತೆ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವ​ರನ್ನು ಆಗ್ರಹಿ​ಸಿ​ದ್ದಾ​ರೆ.

ಇದಕ್ಕೆ ಪ್ರತಿ​ಯಾಗಿ ಸಿದ್ದ​ರಾ​ಮಯ್ಯ ಅವರು, ರೇವಣ್ಣ ಹಸ್ತ​ಕ್ಷೇಪ ವಿಚಾ​ರ​ವನ್ನು ಡಿ.5ರಂದು ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಪ್ರಸ್ತಾ​ಪಿ​ಸು​ವು​ದಾಗಿ ಭರ​ವಸೆ ನೀಡಿ​ದರು. ಅಲ್ಲದೆ, ಕಂಗೆ​ಟ್ಟಿ​ರುವ ಹಾಸನ ಜಿಲ್ಲೆಯ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಿಗೆ ಉತ್ಸಾಹ ತುಂಬಲು ಹಾಸನ ಜಿಲ್ಲಾ ಕಾಂಗ್ರೆಸ್‌ ಬೆಳ​ಗಾವಿ ಅಧಿ​ವೇ​ಶನದ ನಂತರ ಹಾಸ​ನ​ದಲ್ಲಿ ಆಯೋ​ಜಿ​ಸುವ ಕಾರ್ಯ​ಕ​ರ್ತರ ಸಮಾ​ವೇಶದಲ್ಲೂ ಪಾಲ್ಗೊ​ಳ್ಳುವುದಾಗಿ ಅಭಯ ನೀಡಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

ಗುರುವಾರ ವಿಧಾನಪರಿಷತ್‌ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಮುಖಂಡರಾದ ಎಚ್‌.ಎಂ.ವಿಶ್ವನಾಥ್‌, ಮಂಜೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಮಂಥರ್‌ಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಹಾಸನ ಕಾಂಗ್ರೆಸ್‌ ಮುಖಂಡರು ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.

ಕಾಂಗ್ರೆಸ್‌ ಬೆಂಬಲದಿಂದಲೇ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದಿದೆ. ಆದರೆ ಈ ವಿಶ್ವಾಸವಿಲ್ಲದೆ ಮೈತ್ರಿ ಸರ್ಕಾರದ ಜೆಡಿಎಸ್‌ ಸಚಿವ ಎಚ್‌.ಡಿ.ರೇವಣ್ಣ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಇಷ್ಟೂದಿನ ಸಹಿಸಿಕೊಂಡು ಬಂದಿದ್ದೇವೆ, ಇನ್ನು ಮುಂದೆ ಸಹಿಸಿಕೊಳ್ಳಲು ಆಗುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಉಳಿಯಬೆಕಾದರೆ ನೀವು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುವ ಹಂತಕ್ಕೆ ರೇವಣ್ಣ ಹೋಗಿದ್ದಾರೆ. ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಪ್ರಾಧಿಕಾರಗಳ ನೇಮಕಾತಿ, ಅಭಿ​ವೃದ್ಧಿ ವಿಚಾ​ರ​ದಲ್ಲೂ ಕಾಂಗ್ರೆಸ್‌ ನಾಯ​ಕ​ರನ್ನು ಸಂಪೂ​ರ್ಣ​ವಾಗಿ ನಿರ್ಲ​ಕ್ಷಿ​ಸ​ಲಾ​ಗು​ತ್ತಿದೆ ಎಂದು ದೂರಿದರು.

ಕಿರುಕುಳ ನೀಡಿಲ್ಲ

ಹಾಸನ ಜಿಲ್ಲೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಾನು ಯಾವ ಕಿರುಕುಳವನ್ನೂ ನೀಡಿಲ್ಲ. ನನ್ನ ಮೇಲೆ ಏಕೆ ದೂರು ನೀಡಿದರೋ ಗೊತ್ತಿಲ್ಲ. ಈ ಬಗ್ಗೆ ಸಿದ್ದರಾಮಣ್ಣ ಕರೆದರೆ ಹೋಗಿ ಸ್ಪಷ್ಟನೆ ನೀಡುತ್ತೇನೆ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದೇನೆ.

- ಎಚ್‌.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

ಡಿಕೆಶಿ-ಪರಂ ಬಗ್ಗೆಯೂ ದೂರು:

ಇಷ್ಟೆಲ್ಲಾ ಸಮಸ್ಯೆ ಹೇಳಿಕೊಂಡು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ. ಶಿವಕುಮಾರ್‌ ಬಳಿ ಹೋದರೆ ಹಾಸನದವರು ನನ್ನ ಹತ್ತಿರ ಬರಲೇಬೇಡಿ ಎಂದು ಹೇಳುತ್ತಿದ್ದಾರೆ. ರೇವಣ್ಣ ಅವರಿಗೆ ಕಾಂಗ್ರೆ​ಸ್‌ನ ಈ ಪ್ರಭಾವಿ ಸಚಿ​ವರೇ ಹೆದರಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ನಾವು ಎಲ್ಲಿಗೆ ಹೋಗಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾ​ದರೆ ಕಾಂಗ್ರೆಸ್‌ ಪಕ್ಷ​ವನ್ನು ಜಿಲ್ಲೆ​ಯಲ್ಲಿ ಹೇಗೆ ಉಳಿ​ಸ​ಬೇಕು ಎಂದು ಪ್ರಶ್ನಿ​ಸಿ​ದರು.

ಇದಕ್ಕೆ ಪ್ರತಿ​ಯಾಗಿ ಸಿದ್ದ​ರಾ​ಮಯ್ಯ ಅವರು ಹಾಸನ ಜಿಲ್ಲಾ ಕಾಂಗ್ರೆಸ್‌ ನಾಯ​ಕರ ಹಿತ ಕಾಯುವ ಆಶ್ವಾ​ಸ​ನೆ​ಯನ್ನು ನೀಡಿ​ದರು ಎಂದು ಮೂಲ​ಗಳು ಹೇಳಿ​ವೆ.