ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮೃತಪಟ್ಟ ಭೂಮಿಕ್‌ನ ತಂದೆ ಲಕ್ಷ್ಮಣ್, ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿ ಗೋಳಾಡಿದ್ದಾರೆ. ಮನೆಯ ಪಕ್ಕದ ಕಾಫಿ ತೋಟದಲ್ಲಿ ಮಗನನ್ನು ಸಮಾಧಿ ಮಾಡಲಾಗಿದ್ದು, ಈ ದುಃಖ ಯಾರಿಗೂ ಬರಬಾರದು ಎಂದು ಕಣ್ಣೀರು ಹಾಕಿದ್ದಾರೆ.
ಹಾಸನ (ಜೂ.7): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವು ಕಂಡಿದ್ದರು. ಈ ವೇಳೆ ಹಾಸನದ ಬೇಲೂರಿನ ಭೂಮಿಕ್ ಕೂಡ ಸಾವು ಕಂಡಿದ್ದ. ಮೃತದೇಹವನ್ನು ಅವರ ಮನೆಯ ಸಮೀಪದ ಜಾಗದಲ್ಲಿ ಮಣ್ಣು ಮಾಡಲಾಗಿತ್ತು. ಶನಿವಾರ ಭೂಮಿಕ್‌ನ ತಂದೆ ಲಕ್ಷ್ಮಣ್ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿ, ಗೋಳಾಡಿದ್ದಾರೆ.
ಮಗನ ಸಮಾಧಿ ತಬ್ಬಿ ಕಣ್ಣೀರು ಹಾಕಿದ್ದು, ನನಗೆ ನನ್ನ ಮಗ ಬೇಕು ಅಯ್ಯೋ..ನನ್ನ ಮಗ ಎಲ್ಲೋದ? ಎಂದು ಗೋಳಾಡಿದ್ದಾರೆ. ಈ ತರಹ ಪರಿಸ್ಥಿತಿ ಯಾರಿಗೂ ಬರಬಾರದು. ಇದೇ ಜಾಗದಲ್ಲಿ ಮಗನ ಮಲಗಿಸಿದ್ದೀನಿ. ನನ್ನ ಮಗನಿಗೋಸ್ಕರ ಮಾಡಿದ್ದ ಜಾಗ ಇದು. ನನ್ನ ಮಗನ ಜೊತೆನೆ ನಾನೂ ಮಲಗುತ್ತೀನಿ. ಈ ತರಹ ಪರಿಸ್ಥಿತಿ ಯಾವ ತಂದೆಗೂ ತಾಯಿಗೂ ಬರಬಾರದು. ನೋಡಿ..ಯಾರಾರು ಬ್ಯಾಡ್ ಕಮೆಂಟ್ ಮಾಡ್ತಿರಾ, ಯಾವ ತಂದೆ ತಾಯಿಗೂ ಈ ಪರಿಸ್ಥಿತಿ ಬರಬಾರದು ಎಂದು ಗೋಳಾಡಿದ್ದಾರೆ. ಬೇಲೂರಿನ ಕುಪ್ಪಗೋಡಿನಲ್ಲಿರುವ ಭೂಮಿಕ್ ಸಮಾಧಿಯ ಮೇಲೆ ಲಕ್ಷ್ಮಣ್ ಬಿದ್ದು ಹೊರಳಾಡಿದ್ದಾರೆ.
ಅಯ್ಯೋ ಇದು ಯಾರಿಗೂ ಬರಬಾರದು. ಇದೇ ಜಾಗದಲ್ಲಿ ನನ್ನ ಮಗನನ್ನ ಮಲಗಿಸಿದ್ದೀನಿ. ನನ್ನ ಮಗನಿಗೋಸ್ಕರ ಮಾಡಿದ್ದ ಜಾಗ ಇದು. ಇಲ್ಲೇ ಇವನನ್ನ ಇರಿಸಿದ್ದೀನಿ. ಈ ಥರ ಪರಿಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರೋದು ಬೇಡ. ನನ್ನ ಮಗನನ್ನ ಇಲ್ಲೇ ಮಲಗಿಸಿದ್ದೀನಿ. ನನ್ನ ಮಗನ ಜೊತೆಯಲ್ಲೇ ಮಲಗುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.
ಕುಪ್ಪಗೋಡು ಬಳಿ ಲಕ್ಷ್ಮಣ್ ಖರೀದಿ ಮಾಡಿದ್ದ ಜಾಗದಲ್ಲಿಯೇ ಭೂಮಿಕ್‌ನನ್ನು ಸಮಾಧಿ ಮಾಡಲಾಗಿತ್ತು. ಮನೆಯ ಪಕ್ಕದಲ್ಲಿಯೇ ಇರುವ ಕಾಫಿ ತೋಟ ಇದಾಗಿದೆ. ಅಂತ್ಯಕ್ರಿಯೆ ವೇಳೆ ಹೆತ್ತವರು, ಸಂಬಂಧಿಕರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಕಡೆ ಕ್ಷಣ ಮಗನ ಮುಖ ನೋಡಿ ಲಕ್ಷ್ಮಣ್ ಕೂಡ ಗೋಳಾಡಿದ್ದರು.
ಅಂತ್ಯ ಕ್ರಿಯೆ ವೇಳೆ ಭೂಮಿಕನ್ ಪ್ರೀತಿಯಿಂದ ಸಾಕಿದ್ದ ಶ್ವಾನಗಳು ಕೂಡ ಮೃತದೇಹದ ಬಳಿ ಬಂದಿದ್ದವು. ಕೊನೆ ಕ್ಷಣದಲ್ಲಿ ತನ್ನ ಮಾಲೀಕನನ್ನು ಬಾಯಿಂದ ಮುಟ್ಟಿ ಶ್ವಾನಗಳು ಮುದ್ದಾಡಿದ್ದವು. ತುಂಬಾ ಪ್ರೀತಿಯಿಂದ ಶ್ವಾನಗಳನ್ನು ಭೂಮಿಕ್ ಸಾಕಿದ್ದ. ಸಿವಿ, ಚಿಂಟು, ಜೆರಿ ಹೆಸರಿನ ಶ್ವಾನಗಳನ್ನು ಭೂಮಿಕ್ ಹಾಗೂ ಲಕ್ಷ್ಮಣ್ ಸಾಕಿದ್ದರು. 'ಅಣ್ಣನ ಮುಖವನ್ನು ಕೊನೆಯದಾಗಿ ನೋಡ್ಕೊಬಿಡು ಎಂದು ಹೇಳಿ ಭೂಮಿಕ್ ತಂದೆ ಗೋಳಾಡಿದ್ದರು.
