ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ನಂತರ, ಕೆಎಸ್‌ಸಿಎ ಕಾರ್ಯದರ್ಶಿಗಳಾದ ಎ. ಶಂಕರ್ ಮತ್ತು ಇಎಸ್ ಜಯರಾಮ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಜೂ.7): ರಾಷ್ಟ್ರಮಟ್ಟದಲ್ಲಿ ಬೆಂಗಳೂರು ಹಾಗೂ ಕರ್ನಾಟಕದ ತಲೆತಗ್ಗಿಸುವಂಥ ಘಟನೆಯಲ್ಲಿ 11 ಮಂದಿ ಅಮಾಯಕ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ಇದಕ್ಕೆ ಈಗಾಗಲೇ ಪೊಲೀಸ್ ಇಲಾಖೆಯ ಹಲವು ಹಿರಿಯ ನಾಯಕರನ್ನು ಸರ್ಕಾರ ಸಸ್ಪೆಂಡ್ ಮಾಡಿದ್ದರೆ, ಇಂಟಲಿಜೆನ್ಸ್ ಫೆಲ್ಯೂರ್ ಆಗಿರುವ ಕಾರಣಕ್ಕೆ ಈ ವಿಭಾಗದ ಮುಖ್ಯಸ್ಥರನ್ನೂ ವರ್ಗಾವಣೆ ಮಾಡಲಾಗಿದೆ. ಈಗ ಕೆಎಸ್‌ಸಿಎಯಲ್ಲೂ ತಲೆದಂಡದ ಪರ್ವ ಆರಂಭವಾಗಿದೆ.
ಕೆಎಸ್‌ಸಿಎ ಕಾರ್ಯದರ್ಶಿ 66 ವರ್ಷದ ಎ.ಶಂಕರ್ ಹಾಗೂ 59 ವರ್ಷದ ಇಎಸ್ ಜಯರಾಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅವರು ಕೆಎಸ್‌ಸಿಎ ಅಧ್ಯಕ್ಷರಿಗೆ ಸಲ್ಲಿಕೆ ಮಾಡಿದ್ದಾರೆ. ಇಡೀ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಅದರಲ್ಲೂ ಕರ್ನಾಟಕ ಹೈಕೋರ್ಟ್ ಘಟನೆಯ ಕುರಿತಾಗಿ ಸ್ವಯಂಪ್ರೇರಿತ ಕೇಸ್ ದಾಖಲು ಮಾಡಿದ ಬಳಿಕ ಸರ್ಕಾರಕ್ಕೂ ಘಟನೆಯ ಗಂಭೀರತೆಯ ಬಗ್ಗೆ ಗೊತ್ತಾಗಿದೆ.
ಇಡೀ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಬೆಂಗಳೂರು ಕಮೀಷನರ್ ಆಗಿದ್ದ ಬಿ. ದಯಾನಂದ್ ಅವರನ್ನು ಸಸ್ಪೆಂಡ್ ಮಾಡಿದ್ದರೆ, ಇನ್ನೊಂದೆಡೆ ಇಂಟಲಿಜೆನ್ಸ್ ಮುಖ್ಯಸ್ಥರಾಗಿದ್ದ ಹೇಮಂತ್ ನಿಂಬಾಳ್ಕರ್‌ರನ್ನು ವರ್ಗಾವಣೆ ಮಾಡಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ರನ್ನೂ ಕಿಕ್‌ಔಟ್ ಮಾಡಲಾಗಿದೆ.
ಇಷ್ಟೆಲ್ಲಾ ಆಗಿದ್ದರೂ ಘಟನೆಗೆ ಮೂಲ ಕಾರಣವಾಗಿರುವ ಸರ್ಕಾರದ ಮಟ್ಟದ ಅಧಿಕಾರಿಗಳು, ಮಂತ್ರಿಗಳು ಏನೂ ಆಗದವರಂತೆ ಖುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಇಡೀ ಘಟನೆಗೆ ಸರ್ಕಾರದ ಆತುರವೇ ಕಾರಣ ಎನ್ನುವುದು ಈಗ ಬಹುತೇಕವಾಗಿ ಗೊತ್ತಾಗಿದೆ. ಪೊಲೀಸ್ ಇಲಾಖೆ ಅನುಮತಿ ನೀಡಲು ನಿರಾಕರಿಸಿದರೂ ಸರ್ಕಾರದ ಹಿರಿಯ ನಾಯಕರು ಅವರ ಮೇಲೆ ಒತ್ತಡ ತಂದು ವಿಧಾನಸೌಧದ ಎದುರು ಕಾರ್ಯಕ್ರಮ ಮಾಡಿದ್ದರು. ಕೆಲ ಮೀಟರ್‌ಗಳ ಅಂತರದಲ್ಲಿ ಎರಡು ಕಾರ್ಯಕ್ರಮಗಳು, ಇಡೀ ಪ್ರದೇಶದಲ್ಲಿ ಇದ್ದ ಅಪಾರ ಪ್ರಮಾಣದ ಜನಸ್ತೋಮದಿಂದಾಗಿ ಈ ಘಟನೆ ಸಂಭವಿಸಿದೆ.
ಆದರೆ, ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೈಕಿ ಯಾರೊಬ್ಬರೂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿಲ್ಲ.

