ವಿಶ್ವವಿಖ್ಯಾತ ಹಂಪಿಯಲ್ಲಿ, ಫ್ರಾನ್ಸ್ ಮೂಲದ ಪ್ರವಾಸಿಗರೊಬ್ಬರು ಗುಡ್ಡ ಹತ್ತುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡರು. ಸುಮಾರು ಎರಡು ದಿನಗಳ ಕಾಲ ನೋವಿನಿಂದ ನರಳಿದ ನಂತರ, ಸ್ಥಳೀಯ ರೈತರು ಮತ್ತು ಅಧಿಕಾರಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಜಯನಗರ (ಡಿ.26): ವಿಶ್ವವಿಖ್ಯಾತ ಹಂಪಿಯ ಪ್ರವಾಸಿ ತಾಣದಲ್ಲಿ ಫ್ರಾನ್ಸ್ ಮೂಲದ ಪ್ರಜೆಯೊಬ್ಬರು ಗುಡ್ಡ ಹತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಹಂಪಿಯ ಅಷ್ಟಭುಜ ಸ್ನಾನದ ಕೊಳ್ಳದ ಹಿಂಭಾಗದ ಗುಡ್ಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರ್ಜನ ಪ್ರದೇಶಕ್ಕೆ ತೆರಳಿದ್ದಾಗ ಸಂಭವಿಸಿದ ಅವಘಡ
ಫ್ರಾನ್ಸ್ ಮೂಲದ ಬ್ರೋನೊ ರೋಜರ್ (52) ಎಂಬವರು ಕಳೆದ 24ನೇ ತಾರೀಖಿನಂದು ಸಾಯಂಕಾಲ 6 ಗಂಟೆ ಸುಮಾರಿಗೆ ಅಷ್ಟಭುಜ ಸ್ನಾನದ ಕೊಳ್ಳದ ಹಿಂಭಾಗದ ಗುಡ್ಡದ ಬಳಿ ತೆರಳಿದ್ದರು. ಈ ವೇಳೆ ಗುಡ್ಡ ಹತ್ತಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ನಿರ್ಜನ ಪ್ರದೇಶವಾಗಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು ಅವರಿಗೆ ಸಹಾಯಕ್ಕಾಗಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ನೋವಿನಲ್ಲೇ ಎರಡು ದಿನ ಗುಡ್ಡದಲ್ಲೇ ಕಾಲ ಕಳೆದ ಬ್ರೋನೊ!
ಕಾಲು ಜಾರಿ ಬಿದ್ದ ರೋಜರ್ ಅವರಿಗೆ ಎದ್ದು ಓಡಾಡಲು ಸಾಧ್ಯವಾಗದಷ್ಟು ಗಂಭೀರ ಗಾಯವಾಗಿತ್ತು. ಹೀಗಾಗಿ ಅವರು ಸುಮಾರು ಎರಡು ದಿನಗಳ ಕಾಲ ಅದೇ ಗುಡ್ಡದ ಹಿಂಭಾಗದ ಬಳಿ ನೋವಿನಿಂದ ನರಳುತ್ತಾ ಕಾಲ ಕಳೆದಿದ್ದಾರೆ. ಕೊನೆಗೆ ಧೈರ್ಯಗುಂದದೆ, ಅಲ್ಲಿಂದ ಹತ್ತಿರದಲ್ಲಿದ್ದ ಬಾಳೆ ತೋಟವೊಂದಕ್ಕೆ ಹೇಗೋ ಕಷ್ಟಪಟ್ಟು ತೆವಳಿಕೊಂಡು ಬಂದಿದ್ದಾರೆ.
ರಕ್ಷಣೆ ಮಾಡಿದ ಸ್ಥಳೀಯ ರೈತರು ಮತ್ತು ಅಧಿಕಾರಿಗಳು
ಬಾಳೆ ತೋಟಕ್ಕೆ ತೆವಳಿಕೊಂಡು ಬಂದಿದ್ದ ವಿದೇಶಿ ಪ್ರಜೆಯನ್ನು ಗಮನಿಸಿದ ಸ್ಥಳೀಯ ರೈತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪುರಾತತ್ವ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ರೋಜರ್ ಅವರನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.


