ಬೆಂಗಳೂರಿನಲ್ಲಿ ಎಚ್‌ಎಎಲ್‌ನಿಂದ ಹಸ್ತಾಂತರ, ಇನ್ನೂ 9 ಕಾಪ್ಟರ್‌ ಖರೀದಿಗೆ ಕರಾವಳಿ ಪಡೆ ಸಜ್ಜು

ಬೆಂಗಳೂರು(ನ.16): ಭಾರತೀಯ ತೀರ ರಕ್ಷಣಾ ಪಡೆಗೆ 16 ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ (ಎಎಲ್‌ಎಚ್‌) ಅನ್ನು ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಹಸ್ತಾಂತರಿಸಿದೆ. ಇದೇ ವೇಳೆ 9 ಹೊಸ ಹೆಲಿಕಾಪ್ಟರ್‌ ಖರೀದಿಯ ಇಚ್ಛೆಯನ್ನು ತೀರ ರಕ್ಷಣಾ ಪಡೆ ವ್ಯಕ್ತಪಡಿಸಿದೆ.

ನಗರದ ಎಚ್‌ಎಎಲ್‌ನ ಹೆಲಿಕಾಪ್ಟರ್‌ ಸಂಕೀರ್ಣದಲ್ಲಿ ಹಸ್ತಾಂತರ ಕಾರ್ಯಕ್ರಮದ ಬಳಿಕ ಮಾತನಾಡಿದ ಎಚ್‌ಎಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ. ಬಿ. ಅನಂತಕೃಷ್ಣನ್‌, ‘ಹೆಲಿಕಾಪ್ಟರ್‌ಗಳ ನಿರ್ವಹಣೆ ಸಹಿತ ತೀರ ರಕ್ಷಣಾ ಪಡೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಕ್ಷಣಾ ವಲಯದಲ್ಲಿ ಮೇಕ್‌ ಇನ್‌ ಇಂಡಿಯಾ ಇನ್ನಷ್ಟುಬಲಿಷ್ಠಗೊಳಿಸಲು ಮತ್ತು ಗ್ರಾಹಕರ ಹಿತ ಕಾಯಲು ವೇಗ ಮತ್ತು ದಕ್ಷವಾಗಿ ಕಾರ್ಯನಿರ್ವಹಿಸಲು ಎಚ್‌ಎಎಲ್‌ ಬದ್ಧವಾಗಿದೆ’ ಎಂದು ಹೇಳಿದರು.

ತರಬೇತಿ ವಿಮಾನಕ್ಕೆ ಎಂಜಿನ್‌ ಪೂರೈಕೆಗಾಗಿ ಹನಿವೆಲ್‌ನೊಂದಿಗೆ HAL 800 ಕೋಟಿ ಒಪ್ಪಂದ

ತೀರ ರಕ್ಷಣಾ ಪಡೆಯ ಮಹಾನಿರ್ದೇಶಕ ವಿ. ಎಸ್‌. ಪಠಾನೀಯ ಮಾತನಾಡಿ, ‘ಹೊಸದಾಗಿ 9 ಹೆಲಿಕಾಪ್ಟರ್‌ ಖರೀದಿಸುವ ಇಂಗಿತ ಪತ್ರ ನೀಡಿದ್ದೇವೆ. ಕೋವಿಡ್‌ ಇದ್ದರೂ ಎಚ್‌ಎಎಲ್‌ ಕಡಿಮೆ ಅವಧಿಯಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಹೆಲಿಕಾಪ್ಟರ್‌ ಹಸ್ತಾಂತರಿಸಿದೆ. ಈ ಹೆಲಿಕಾಪ್ಟರ್‌ಗಳು ಭಾರತ ಸಮುದ್ರ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟುಸಧೃಢಗೊಳಿಸಿವೆ’ ಎಂದು ಹೇಳಿದರು. ಹೆಲಿಕಾಪ್ಟರ್‌ ಸ್ವದೇಶಿ ನಿರ್ಮಿತವಾಗಿದ್ದು ಈಗಾಗಲೇ ಹಲವು ದೇಶಗಳಿಗೆ ರಫ್ತಾಗಿವೆ. ಈವರೆಗೆ 330 ಹೆಲಿಕಾಪ್ಟರ್‌ ನಿರ್ಮಿಸಲಾಗಿದ್ದು ಒಟ್ಟು 3.37 ಲಕ್ಷ ಗಂಟೆ ಹಾರಾಟ ನಡೆಸಿದೆ.