Asianet Suvarna News Asianet Suvarna News

ದಕ್ಷಿಣ ಕನ್ನಡ: 37 ಸೆಕೆಂಡ್ಸ್‌ನಲ್ಲಿ ನೀರೊಳಗೆ 26 ಪಲ್ಟಿ!ಹೊಸ ವಿಶ್ವ ದಾಖಲೆ ನಿರ್ಮಿಸಿದ 13ರ ಪೋರ

ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್ (ಪಲ್ಟಿ)ಗಳ ಮೂಲಕ ಮಂಗಳೂರಿನ 13ರ ಹರೆಯದ ಪೋರ ಶನಿವಾರ ನೊಬೆಲ್ ವಿಶ್ವ ದಾಖಲೆ ಮಾಡಿದ್ದಾನೆ.

Hadrian Vegas from mangaluru angaluru boy set world record with 26 flips in 37 seconds rav
Author
First Published Aug 11, 2024, 6:26 AM IST | Last Updated Aug 12, 2024, 11:44 AM IST

 ಮಂಗಳೂರು (ಆ.11): ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್ (ಪಲ್ಟಿ)ಗಳ ಮೂಲಕ ಮಂಗಳೂರಿನ 13ರ ಹರೆಯದ ಪೋರ ಶನಿವಾರ ನೊಬೆಲ್ ವಿಶ್ವ ದಾಖಲೆ ಮಾಡಿದ್ದಾನೆ.

ಮಂಗಳೂರಿನ ಕಾರ್ಮೆಲ್ ಸಿಬಿಎಎಸ್‌ಸಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿರುವ ಹ್ಯಾಡ್ರಿಯನ್ ವೇಗಸ್ ಈ ನೂತನ ವಿಶ್ವ ದಾಖಲೆಯನ್ನು ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಿರ್ಮಿಸಿದ್ದಾನೆ.

ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ

15 ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಪ್ರಥಮ ದಾಖಲೆ ಎನ್ನಲಾಗಿದ್ದು, ಖ್ಯಾತ ಈಜುಪಟು ಚಂದ್ರಶೇಖರ ರೈ ಎಂಬವರು ಈ ಹಿಂದೆ ಹಿರಿಯ ವಿಭಾಗದಲ್ಲಿ ನೀರೊಳಗೆ 1 ನಿಮಿಷ 2 ಸೆಕೆಂಡ್ಸ್‌ನಲ್ಲಿ 28 ಪಲ್ಟಿ ಹೊಡೆದಿರುವ ದಾಖಲೆ ಮಾಡಿದ್ದರು.

ನೊಬೆಲ್ ವರ್ಲ್ಡ್ ರೆಕಾರ್ಡ್ಸ್‌ನ ರಾಜ್ಯ ನಿರ್ದೇಶಕ ಡಾ. ಕೃಷ್ಣಮೂರ್ತಿ ಅವರು ಬಾಲಕ ಹ್ಯಾಡ್ರಿಯನ್ ಅವರ ಪಲ್ಟಿ ಸಾಹಸವನ್ನು ದಾಖಲಿಸಿಕೊಂಡರು. ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯೆ ನೀರಿನಲ್ಲಿ ಏಕಕಾಲಕ್ಕೆ 26 ಪಲ್ಟಿ ಹೊಡೆಯುವುದು ಹ್ಯಾಡ್ರಿಯನ್ ಅವರ ದಾಖಲೆಯಾಗಿದ್ದು, ಆತನಿಗೆ ತರಬೇತಿ ನೀಡಿದ ನನಗೂ ಹೆಮ್ಮೆಯ ವಿಚಾರ ಎಂದು ಸ್ವಿಮ್ಮಿಂಗ್ ಕೋಚ್ ಅರೋಮಲ್ ಸಂತಸ ವ್ಯಕ್ತಪಡಿಸಿದರು. 

ಬೇಸಿಗೆ ರಜೆಯ ವೇಳೆ ಹ್ಯಾಡ್ರಿಯನ್‌ನ ಪ್ರತಿಭೆಯನ್ನು ನೋಡಿ ಆತನಿಗೆ ವಿಶೇಷ ರೀತಿಯ ತರಬೇತಿ ನೀಡಲಾಯಿತು. ನಗರದ ಪ್ರೆಸ್ಟೀಜ್ ಅಂತಾರಾಷ್ಟ್ರೀಯ ಶಾಲೆಯ ಈಜುಕೊಳದಲ್ಲಿ ತರಬೇತಿ ನೀಡಲಾಗಿದ್ದು, ಬಳಿಕ ಎಮ್ಮೆಕೆರೆ ಈಜುಕೊಳದಲ್ಲೂ ತರಬೇತಿ ಮುಂದುವರಿಸಲಾಯಿತು. ಕಳೆದ ಸುಮಾರು 10 ತಿಂಗಳಿನಿಂದ ಈತ ತರಬೇತಿ ಪಡೆಯುತ್ತಿದ್ದಾನೆ ಎಂದು ಅರೋಮಲ್ ತಿಳಿಸಿದರು. ಆತ ತನ್ನ 2ನೇ ವಯಸ್ಸಿನಲ್ಲಿಯೇ ನೀರು ಕಂಡರೆ ಈಜಲು ಸಿದ್ಧನಾಗುತ್ತಿದ್ದ. ಹಾಗಾಗಿ ರಜೆಯಲ್ಲಿ ಆತನಿಗೆ ತರಬೇತಿಗಾಗಿ ಹಾಕಿದ್ದೆವು. ಆದರೆ ಆತನಲ್ಲಿ ಇಂತಹ ಪ್ರತಿಭೆ ಇದೆ ಎಂದು ಗೊತ್ತಿರಲಿಲ್ಲ. ಅದನ್ನು ಆತನ ಕೋಚ್ ಗುರುತಿಸಿ ಸೂಕ್ತ ತರಬೇತಿ ನೀಡಿದ ಕಾರಣ ಆತನಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹ್ಯಾಡ್ರಿಯನ್ ತಂದೆ, ವೃತ್ತಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿರುವ ಅನಿಲ್ ವೇಗಸ್ ಹೇಳಿದರು. 

ನೊಬೆಲ್ ವಿಶ್ವದಾಖಲೆಯನ್ನು ದಾಖಲು ಮಾಡುವ ಸಂದರ್ಭ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಜಿಎಂ ಅರುಣ್ ಪ್ರಭಾ, ಕ್ರೀಡಾ ಇಲಾಖೆಯ ಪ್ರವೀಣ್ ಡಿಸೋಜಾ, ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಶಾಲೆ, ಕಾರ್ಮೆಲ್ ಸಿಬಿಎಸ್‌ಸಿ ಶಾಲೆಯ ಪ್ರತಿನಿಧಿಗಳು ಇದ್ದರು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿದೆ ಜಗತ್ತಿನ ಅತೀ ಉದ್ದದ ಕೋನ್‌ ಐಸ್‌ಕ್ರೀಂ, ಅಬ್ಬಬ್ಬಾ ಇಷ್ಟೊಂದು ಕೆಜಿನಾ?

ಗಿನ್ನೆಸ್ ವಿಶ್ವ ದಾಖಲೆಯ ಗುರಿ

ನನಗೆ ಸ್ವಿಮ್ಮಿಂಗ್ ಎಂದರೆ ತುಂಬಾ ಇಷ್ಟ. ಬೇಸಿಗೆ ರಜೆಯಲ್ಲಿ ನಾನು ಈಜು ತರಬೇತಿಗಾಗಿ ಬಂದಿದ್ದೆ. ಅಲ್ಲಿ ಅರೋಮಲ್ ನೀರೊಳಗೆ ಪಲ್ಟಿ ಬಗ್ಗೆ ಹೇಳಿಕೊಟ್ಟರು. ನಿರಂತರ ಅಭ್ಯಾಸ ಮಾಡಿದೆ. ಆರಂಭದಲ್ಲಿ ಏಳೆಂಟೆ ಪಲ್ಟಿ ಮಾಡುತ್ತಾ ತರಬೇತಿ ಅವಧಿಯಲ್ಲಿ 23 ಪಲ್ಟಿ ಹೊಡೆಯಲು ಅಭ್ಯಾಸ ಮಾಡಿದೆ. ಇವತ್ತು 26 ಪಲ್ಟಿ ಹೊಡೆದ ಬಗ್ಗೆ ಹೆಮ್ಮೆ ಆಗಿದೆ. ಮುಂದೆ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಗುರಿ ಇದೆ ಎಂದಿದ್ದಾರೆ ಹ್ಯಾಡ್ರಿಯನ್ ವೇಗಸ್.

Latest Videos
Follow Us:
Download App:
  • android
  • ios