ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿ ಮೂಲದವರ ಕುಟುಂಬಸ್ಥರು ಉತ್ತರ ಪ್ರದೇಶ ಸರ್ಕಾರದ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಮೃತರ ಆಭರಣಗಳು 1600 ಕಿ.ಮೀ ದೂರದಿಂದ ಕುಟುಂಬಕ್ಕೆ ತಲುಪಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಬೆಂಗಳೂರು (ಫೆ.6): ಇಡೀ ದೇಶದಲ್ಲಿ ಈಗ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿದ್ದರೂ ಸಹ ಪ್ರಯಾಗ್‌ರಾಜ್‌ನಲ್ಲಿ ಆದ ಕಾಲ್ತುಳಿತದಲ್ಲಿ 30 ಮಂದಿ ಭಕ್ತರು ಸಾವು ಕಂಡಿದ್ದು ಇಡೀ ಕಾರ್ಯಕ್ರಮದ ವ್ಯವಸ್ಥೆ ಮೇಲೆ ಟೀಕೆ ಮಾಡುವಂತಾಗಿತ್ತು. ಕರ್ನಾಟಕದ ಬೆಳಗಾವಿಯ ನಾಲ್ವರು ಈ ದುರಂತದಲ್ಲಿ ಸಾವು ಕಂಡಿದ್ದರು. ಇದರ ನಡುವೆ ರಾಜ್ಯದಲ್ಲಿ ಕಾಲ್ತುಳಿತ ಸಂತ್ರಸ್ಥ ಕುಟುಂಬದ ಸದಸ್ಯರೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ವಿಚಾರ ಸಾಕಷ್ಟು ಗಮನನಸೆಳೆಯುತ್ತದೆ. ಅದರಲ್ಲೂ ಪ್ರಮುಖವಾಗಿ ಉತ್ತರ ಪ್ರದೇಶ ಸರ್ಕಾರದ ಪ್ರಾಮಾಣಿಕತೆಯನ್ನು ಅವರು ಶ್ಲಾಘನೆ ಮಾಡಿದ್ದಾರೆ.

ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ(50) ಮತ್ತು ಅವರ ಮಗಳು ಮೇಘಾ(18) ಹತ್ತರವಾಠ ಸಾವು ಕಂಡಿದ್ದರು. ಈಗ ಜ್ಯೋತಿ ಅವರ ತಮ್ಮ ಗುರುರಾಜ್‌ ಹುದ್ದಾರ್‌ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ಸಾಕಷ್ಟು ಗಮನಸೆಳೆದಿದೆ.

"ನನ್ನ ಅಕ್ಕ ಹಾಗೂ ಅಕ್ಕನ ಮಗಳು ಕಾಲ್ತುಳಿತದಲ್ಲಿ ತೀರಿಹೋದರು ಅವರ ಶವಗಳ ಜೊತೆಗೆ ಅವರು ಧರಿಸಿದ ಎಲ್ಲಾ ಆಭರಣಗಳು 1600 ಕಿ.ಮೀ ದೂರದ ನಮ್ಮ ಮನೆಗೆ ಬಂದು ಸೇರಿದವು. ಇದು ಪ್ರಾಮಾಣಿಕತೆಯ ಉದಾಹರಣೆ ಜೊತೆಗೆ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿದೆ ಎನ್ನುವುದನ್ನು ಹೇಳುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಗುರುರಾಜ್‌ ಮಾಡಿರುವ ಕಾಮೆಂಟ್‌ನ ಸ್ಕ್ರೀನ್‌ ಶಾಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಈ ಘಟನೆಗೆ ಸಂಬಂಧಿಸಿದ ಟೀಕೆಗಳ ನಡುವೆಯೂ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್‌ರಾಜ್‌ನ ಸ್ಥಳೀಯ ಆಡಳಿತ ಹಾಗೂ ಪೊಲೀಸ್‌ ಸಿಬ್ಬಂದಿಗಳ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ. ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಕುಂಭ ಮೇಳದಲ್ಲಿ ಕಾಲ್ತುಳಿತದ ಘಟನೆ ಆಗಿದ್ದು ಅತ್ಯಂತ ದುರದೃಷ್ಟಕರ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ತೆಗೆದುಕೊಂಡ ಅತ್ಯುತ್ತಮ ಕ್ರಮಗಳ ನಡುವೆಯೂ ಇಂಥದೊಂದು ಅವಘಡ ನಡೆದುಹೋಯಿತು. ಇಂತಹ ದುರಂತದ ನಂತರ, ಆ ತುಳಿತಕ್ಕೆ ಒಳಗಾಗಿ ನಿಧನ ಹೊಂದಿದ ಬೆಳಗಾವಿಯ ಯಾತ್ರಿಗಳ ಸಹೋದರ Gururaj Huddar...ಅವರ ಪ್ರತಿಕ್ರಿಯೆ. ಪ್ರಾಮಾಣಿಕತೆಯ ಮಹತ್ವ' ಎಂದು ಬರೆದಿದ್ದಾರೆ.

ಕುಂಭಮೇಳ ಕಾಲ್ತುಳಿತ ಸಾವಲ್ಲೂ ರಾಜಕೀಯ, 2000 ಭಕ್ತರು ಬಲಿಯಾಗಿದ್ದು ಸುಳ್ಳು: ಯೋಗಿ

'ಎಲ್ಲಾ ಘಟನೆಗಳಿಂದ ಹೇಗೆ ನಾವು ಲಾಭವನ್ನು ಪಡೆಯಬಹುದು. ಮತ್ತು ಜನರಿಗೆ ಒಳ್ಳೆಯ ಸಂದೇಶವನ್ನು ಕೊಡಬಹುದು ಎಂಬುದಕ್ಕೆ ಈ ಮೇಲಿನ ನಿಮ್ಮ ಪೋಸ್ಟ್ ಅತ್ಯುತ್ತಮ ಉದಾಹರಣೆಯಾಗಿದೆ. ನಿಮ್ಮ ಪಕ್ಷಕ್ಕೆ ಇದು ಬಹಳ ಸಾಮಾನ್ಯ ಸಂಗತಿ. ಆದರೆ ನಿಮ್ಮಿಂದ ಇದನ್ನು ನಿರೀಕ್ಷಿಸಲಿಲ್ಲ. ಧನ್ಯವಾದಗಳು' ಂದು ಸುರೇಶ್‌ ಕುಮಾರ್‌ ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಮಹಾಕುಂಭದ ನೀರು ಅತಿ ಕಲುಷಿತ, ಕಾಲ್ತುಳಿತದಲ್ಲಿ ಸತ್ತವರ ಮೃತದೇಹವನ್ನ ನದಿಯಲ್ಲೇ ಎಸೆಯಲಾಗಿದೆ: ಜಯಾ ಬಚ್ಛನ್‌

ಇನ್ನು ಸಂಸತ್‌ ಅಧಿವೇಶನದಲ್ಲೂ ಕುಂಭಮೇಳದ ಕಾಲ್ತುಳಿತದ ಬಗ್ಗೆ ವಿಪಕ್ಷಗಳು ಪ್ರಸ್ತಾಪ ಮಾಡಿವೆ. ಎಷ್ಟು ಮಂದಿ ಅಲ್ಲಿ ಸಾವು ಕಂಡಿದ್ದಾರೆ ಅನ್ನೋ ನಿಖರ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರ ನೀಡಬೇಕು ಎಂದು ಒತ್ತಾಯ ಮಾಡಿವೆ.