ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ನದಿಗೆ ಎಸೆಯಲಾಗಿದೆ ಎಂದು ಸಂಸದೆ ಜಯಾ ಬಚ್ಚನ್ ಆರೋಪಿಸಿದ್ದಾರೆ. ಮಹಾಕುಂಭದಲ್ಲಿ ವಿಶೇಷ ವ್ಯಕ್ತಿಗಳಿಗೆ ಮಾತ್ರ ಆತಿಥ್ಯ ನೀಡಲಾಗುತ್ತಿದೆ, ಸಾಮಾನ್ಯರಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ನವದೆಹಲಿ (ಫೆ.4): ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಸಂಬಂಧ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ‘ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೇ ಎಸೆಯಲಾಗಿದ್ದು, ನೀರು ಅತ್ಯಂತ ಕಲುಷಿತವಾಗಿದೆ’ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ನಡೆದ ಜಲ ಶಕ್ತಿ ಬಗೆಗಿನ ಚರ್ಚೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸದ್ಯ ಎಲ್ಲಿಯ ನೀರು ಅಧಿಕ ಕಲುಷಿತವಾಗಿದೆ?. ಅದು ಕುಂಭದಲ್ಲಿ. ಕಾಲ್ತುಳಿತದಲ್ಲಿ ಬಲಿಯಾದವರ ದೇಹವನ್ನು ನದಿಗೇ ಹಾಕಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ’ ಎಂದರು. ಅಂತೆಯೇ, ‘ಮಹಾಕುಂಭದಲ್ಲಿ ವಿಶೇಷ ವ್ಯಕ್ತಿಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದ್ದು, ಸಾಮಾನ್ಯರು ಹಾಗೂ ಬಡವರಿಗೆ ಅಗತ್ಯವಾದ ಯಾವ ವ್ಯವಸ್ಥೆಯನ್ನೂ ಮಾಡಲಾಗಿಲ್ಲ’ ಎಂದೂ ಆರೋಪಿಸಿರುವ ಬಚ್ಚನ್, ಕೋಟಿಗಳ ಸಂಖ್ಯೆಯಲ್ಲಿ ಜನ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾದ ಮಹಾಕುಂಭದಲ್ಲಿ ಕೋಟ್ಯಂತರ ಜನರು ಭಾಗವಹಿಸಿದ್ದಾರೆ ಎಂಬ ಯೋಗಿ ಆದಿತ್ಯನಾಥ್ ಸರ್ಕಾರದ ಹೇಳಿಕೆಯನ್ನು ರಾಜ್ಯಸಭಾ ಸಂಸದೆ ಶ್ರೀಮತಿ ಬಚ್ಚನ್ ತಳ್ಳಿಹಾಕಿದರು. ಕಾಲ್ತುಳಿತದ ಸಮಯದಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಸರ್ಕಾರ ನಿಜವಾದ ಅಂಕಿಅಂಶಗಳನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಹಿಂದೂಗಳಿಗೆ ಪವಿತ್ರವಾದ ಕಾರ್ಯಕ್ರಮವಾದ ಮಹಾಕುಂಭವು ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಜನವರಿ 29 ರಂದು ಮೌನಿ ಅಮಾವಾಸ್ಯೆಯ ಅಮೃತ ಸ್ನಾನದ ಸಮಯದಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸ್ಥಳಾವಕಾಶಕ್ಕಾಗಿ ಭಾರಿ ಜನಸಮೂಹ ಬ್ಯಾರಿಕೇಡ್‌ಗಳನ್ನು ಮುರಿದು ನೂಕಾಟ ನಡೆಸಿದಾಗ ಕನಿಷ್ಠ 30 ಜನರು ಸಾವನ್ನಪ್ಪಿದರು.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, "ಈಗ ಹೆಚ್ಚು ಕಲುಷಿತ ನೀರು ಎಲ್ಲಿದೆ? ಅದು ಕುಂಭಮೇಳದಲ್ಲಿದೆ. ಅದರ ಬಗ್ಗೆ ಯಾರೂ ಯಾವುದೇ ಸ್ಪಷ್ಟೀಕರಣ ನೀಡುತ್ತಿಲ್ಲ. (ಕಾಲ್ತುಳಿತದಲ್ಲಿ ಮೃತಪಟ್ಟವರ) ಶವಗಳನ್ನು ನದಿಗೆ ಎಸೆಯಲಾಗಿದ್ದು, ಇದರಿಂದಾಗಿ ನೀರು ಕಲುಷಿತಗೊಂಡಿದೆ... ಇದು ಅಲ್ಲಿನ ಜನರು ಬಳಸುತ್ತಿರುವ ನೀರು. ಈ ಬಗ್ಗೆ ಯಾರೂ ಯಾವುದೇ ಸ್ಪಷ್ಟೀಕರಣ ನೀಡುತ್ತಿಲ್ಲ" ಎಂದು ಹೇಳಿದರು.
ಕುಂಭಮೇಳದಲ್ಲಿ ಸಾನ್ಯಾ ಅಯ್ಯರ್… ನಾಗ ಸಾಧುಗಳಿಂದ ಆಶೀರ್ವಾದ ಪಡೆದ ನಟಿ
"ದೇಶದ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿಲ್ಲ. ಯಾವುದೇ ವಿಐಪಿ ಉಪಚಾರ ಸಿಗದ ಜನಸಾಮಾನ್ಯರಿಗೆ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ" ಎಂದು ಅವರು ಹೇಳಿದರು.ರಾಜ್ಯ ಸರ್ಕಾರದಿಂದ ನೀವು ಏನನ್ನು ಬಯಸುತ್ತಿದ್ದೀರಿ ಎಂದು ಕೇಳಿದಾಗ, ನಟಿ-ರಾಜಕಾರಣಿ ಹೇಳಿದರು: "ಕನಿಷ್ಠ ಪಕ್ಷ ಕುಂಭಮೇಳದಲ್ಲಿ ಏನಾಯಿತು ಎಂಬುದರ ಬಗ್ಗೆ ಸತ್ಯವನ್ನು ನಮಗೆ ತಿಳಿಸಿ. ಅವರು (ಸರ್ಕಾರ) ಸಂಸತ್ತಿನಲ್ಲಿ ಇದರ ಬಗ್ಗೆ ಮಾತನಾಡಬೇಕು." ಎಂದಿದ್ದಾರೆ.
Watch: ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ ಕನ್ನಡದ ಸ್ಟಾರ್ ನಟಿ!
ರಾಜ್ಯ ಸರ್ಕಾರವು ಕಾಲ್ತುಳಿತದ ಬಗ್ಗೆ ಈಗಾಗಲೇ ತನಿಖೆ ಆರಂಭಿಸಿದೆ ಎಂದು ವರದಿಗಾರರೊಬ್ಬರು ಹೇಳಿದಾಗ "ಯಾವ ತನಿಖೆ ನಡೆಯುತ್ತಿದೆ? ದೇಶದಲ್ಲಿ ಹಲವು ತನಿಖೆಗಳು ನಡೆಯುತ್ತಿವೆ. ಅವರು ಎಂದಿಗೂ ಅಂತಿಮ ತೀರ್ಮಾನ ನೀಡೋದೇ ಇಲ್ಲ. ಈಗ ಕುಂಭಮೇಳದಲ್ಲಿ ಏನಾಗುತ್ತಿದೆ, ನಮಗೆ ನಿಜವಾಗಿಯೂ ತನಿಖೆ ಅಗತ್ಯವಿದೆಯೇ? ಅವರು ಶವಗಳನ್ನು ಎತ್ತಿಕೊಂಡು ನೀರಿಗೆ ಹಾಕಿದ್ದಾರೆ. ಕುಂಭಮೇಳದಲ್ಲಿ ಏನಾಯಿತು ಎಂಬುದು ದೇಶದ ಅತಿದೊಡ್ಡ ಸಮಸ್ಯೆಯಾಗಿದೆ" ಎಂದು ಜಯಾ ಬಚ್ಚನ್ ಹೇಳಿದರು. "ಅವರು (ಸರ್ಕಾರ) (ಸಾವಿನ ಬಗ್ಗೆ) ನಿಖರವಾದ ಅಂಕಿಅಂಶಗಳನ್ನು ನೀಡಬೇಕು" ಎಂದರು.

