ಕೊಪ್ಪಳದಲ್ಲಿ ಮಾಜಿ ಶಾಸಕ ಬಸವರಾಜ್ ದಡೇಸಗೂರು ಮತ್ತು ಸಚಿವ ಶಿವರಾಜ್ ತಂಗಡಗಿ ನಡುವೆ ಗನ್‌ಮ್ಯಾನ್ ವಿವಾದ ಭುಗಿಲೆದ್ದಿದೆ. ದಡೇಸಗೂರು ಅವರಿಗೆ ರಕ್ಷಣೆ ನೀಡುತ್ತಿಲ್ಲ ಎಂಬ ಆರೋಪಕ್ಕೆ ತಂಗಡಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜ್ಞಾನ ಕಡಿಮೆ ಇದ್ದರೆ ಖಾಸಗಿ ಗನ್‌ಮ್ಯಾನ್ ಇಟ್ಟುಕೊಳ್ಳಿ ಎಂದಿದ್ದಾರೆ.

ಕೊಪ್ಪಳ (ಮೇ 26): ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ವಾತಾವರಣ ಮತ್ತೆ ಬಿಸಿಯಾಗಿದ್ದು, ಮಾಜಿ ಶಾಸಕ ಬಸವರಾಜ್ ದಡೇಸಗೂರ ಹಾಗೂ ಹಾಲಿ ಸಚಿವ ಶಿವರಾಜ್ ತಂಗಡಗಿ ನಡುವಿನ ಗನ್ ಮ್ಯಾನ್ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಕೆಲ ದಿನಗಳ ಹಿಂದೆ 'ನನಗೆ ರಕ್ಷಣೆ ನೀಡಲಾಗುತ್ತಿಲ್ಲ, ನಾನು ಮನವಿ ಸಲ್ಲಿಸಿದ್ದರೂ ಗನ್ ಮ್ಯಾನ್ ಕೊಡುತ್ತಿಲ್ಲ' ಎಂಬ ಮಾಜಿ ಶಾಸಕ ಬಸವರಾಜ ದಡೇಸಗೂರು ಅವರ ಹೇಳಿಕೆಯನ್ನು ಖಂಡಿಸಿದ ಸಚಿವ ಶಿವರಾಜ್ ತಂಗಡಗಿ ಮಾಜಿ ಶಾಸಕರಿಗೆ ಜ್ಞಾನವಿಲ್ಲ ಎಂದು ಟೀಕೆ ಮಾಡಿದ್ದಾರೆ.

ಬಸವರಾಜ್ ದಡೇಸಗೂರರ ಆರೋಪ: 'ನಾನು ಮಾಜಿ ಶಾಸಕರಾಗಿದ್ದರೂ ನನಗೆ ಜಿಲ್ಲೆಯಲ್ಲಿ ಯಾವುದೇ ಭದ್ರತೆ ಒದಗಿಸಲಾಗುತ್ತಿಲ್ಲ. ಕೆಲವು ಮಹತ್ವದ ಮನವಿಗಳನ್ನೊಳಗೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನ್ನ ಜೀವ ಭದ್ರತೆ ಕುರಿತು ನಿರ್ಲಕ್ಷ್ಯ ಬೇಡ' ಎಂದು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಸವರಾಜ್ ದಡೇಸಗೂರು ಹೇಳಿಕೆಗೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಗನ್ ಮ್ಯಾನ್ ಕೊಡಬೇಕಾದರೆ ಅದಕ್ಕೊಂದು ನಿಯಮ ಇದೆ. ಗುಪ್ತಚರ ಇಲಾಖೆಯಿಂದ ಮಾಹಿತಿ ತಗೋತಾರೆ. ಮಾಜಿ ಶಾಸಕರಿಗೆ ಜ್ಞಾನ ಕಡಿಮೆ ಇರಬೇಕು. ಅವರು 5 ವರ್ಷ ಶಾಸಕರಾಗಿ ಹೇಗೆ ಆಡಳಿತ ಮಾಡಿದ್ರೋ ಏನೋ? ನಾನು ಮಾಜಿ ಶಾಸಕ ಆಗಿದ್ದಾಗಲೂ ನನಗೆ ಗನ್ ಮ್ಯಾನ್ ಇದ್ದರು. ಏಕೆಂದರೆ ನನಗೆ 8-10 ಜನ ಬೆದರಿಕೆ ಹಾಕಿದ್ದರು. ನಾನು ಸ್ಪೀಕರ್‌ಗೆ ದೂರು ಕೊಟ್ಟಿದ್ದೆ, ಅವಾಗ ನನಗೆ ಗನ್ ಮ್ಯಾನ್ ಎಸ್ಕಾರ್ಟ್ ಕೊಟ್ಟಿದ್ದರು. ಸುಮ್ಮ ಸುಮ್ಮನೆ ಕೊಡ್ತಾರಾ? ನಿಮಗೆ ಶೋಕಿ ಇದ್ರೆ ಖಾಸಗಿ ಗನ್ ಮ್ಯಾನ್ ತಗೋಳಿ‌. ಇಲ್ಲ ನನ್ನ ಹತ್ರ 3 ಜನ ಗನ್ ಮ್ಯಾನ್ ಇದಾರೆ, ನಾನೇ ಒಬ್ಬರನ್ನ ಕಳಸ್ತೀನಿ ಎಂದು ಟೀಕಿಸಿದರು.

ಎಲ್ಲರೂ ಗನ್ ಮ್ಯಾನ್ ಇಟ್ಕೋಳೋದು ಶೋಕಿಗೆ ಅಲ್ಲ. ನಾವು ಜನ ಪ್ರತಿನಿಧಿಗಳು, ಜನರ ಹತ್ರ ಹೊಗೋಕೆ ಹೆದರಿಕೆ ಯಾಕೆ‌? ಜನರು ಗೆಲ್ಲಸಿದರೆ ಮಾತ್ರ ನಾವು ಶಾಸಕರು, ಮಂತ್ರಿ ಆಗುತ್ತೇವೆ. ಗನ್ ಮ್ಯಾನ್ ಬೇಕ ಅನ್ನೋದಾದರೆ ನಿಮಗೆ ಅಷ್ಟು ಭಯ ಇದೆಯಾ? ನನಗೆ ಜನರ ಭಯ ಇದೆ, ನನಗೆ ಬಿಜೆಪಿ, ‌ಮೋದಿ ಭಯವೇ ಇಲ್ಲ‌. ಇನ್ನು ಇವರು ಯಾವ ಲೆಕ್ಕ ಎಂದು ಪರೋಕ್ಷವಾಗಿ ಬಸವರಾಜ್ ದಡೇಸಗೂರು ನನಗೆ ಲೆಕ್ಕವೇ ಅಲ್ಲ ಎಂದರು.

ಬಸವರಾಜ್ ದಡೇಸಗೂರು ಒಂದು ಸಾರಿ ಸೋತಿದ್ದಾನೆ, ಒಂದು ಸಾರಿ ಗೆದ್ದಿದ್ದಾನೆ. ನಾನು 4 ಬಾರಿ ಸ್ಫರ್ದೆ ಮಾಡಿ, ಮೂರು ಬಾರಿ ಮಂತ್ರಿ ಆಗಿದ್ದೇನೆ. ಬಿಜೆಪಿಯವರಿಗೆ ಸಂಸ್ಕೃತಿ , ಸಂಸ್ಕಾರ ಎರಡು ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.