ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಸಿಎಂ ಸ್ಪಷ್ಟನೆ
ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಆದರೆ, ಮತಗಳಿಕೆ ವಿಚಾರದಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ಮೈಸೂರಿನಲ್ಲಿ ಸೋತಿರುವುದು ಸತ್ಯ. ಆದರೆ, ಚಾಮರಾಜನಗರದಲ್ಲಿ ಗೆದ್ದಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು(ಜೂ.15): ನಾವು ಓಟಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಪುನರ್ ಪರಿಶೀಲನೆ ಮಾಡುವ ಪ್ರಶ್ನೆಯೇ ಇಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಆದರೆ, ಮತಗಳಿಕೆ ವಿಚಾರದಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ಮೈಸೂರಿನಲ್ಲಿ ಸೋತಿರುವುದು ಸತ್ಯ. ಆದರೆ, ಚಾಮರಾಜನಗರದಲ್ಲಿ ಗೆದ್ದಿದ್ದೇವೆ ಎಂದರು.
ಅಶೋಕ್ ‘ಗ್ಯಾರಂಟಿ’ ಏಟಿಗೆ ಸಿದ್ದರಾಮಯ್ಯ ಎದಿರೇಟು: ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ!
ಸೋಲಿಗೆ ಕಾರಣವನ್ನು ಮಾಧ್ಯಮದವರ ಮುಂದೆ ಹೇಳುವುದಿಲ್ಲ. ಪಕ್ಷದ ಹೈಕಮಾಂಡ್ ಗೆ ನಾನು ಹೇಳುತ್ತೇನೆ. ಈ ಹಿಂದೆ ಒಂದೇ ಸ್ಥಾನದಲ್ಲಿ ಗೆದ್ದಿದ್ದೇವು. ಈ ಬಾರಿ ರಾಜ್ಯದಲ್ಲಿ 9 ಸ್ಥಾನ ಗೆದ್ದಿದ್ದೇವೆ ಎಂದು ಅವರು ಹೇಳಿದರು.
ದರ್ಶನ್ ಕೇಸಲ್ಲಿ ಮಧ್ಯಪ್ರವೇಶವಿಲ್ಲ: ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ದರ್ಶನ್ ಪ್ರಕರಣದಲ್ಲಿ ಕೆಲವರು ನನ್ನ ಬಳಿ ಪ್ರಭಾವ ಬೀರಲು ಬಂದಿದ್ದರು ಎಂಬುದು ಅಪ್ಪಟ ಸುಳ್ಳು. ನನ್ನ ಬಳಿ ಯಾರೂ ಬಂದಿಲ್ಲ, ಈ ಪ್ರಕರಣದಲ್ಲಿ ಯಾವ ಪ್ರಭಾವವೂ ನಡೆದಿಲ್ಲ ಎಂದರು.
ದರ್ಶನ್ ಇದ್ದ ಠಾಣೆಗೆ ಶಾಮಿಯಾನ ಕಟ್ಟಿರುವ ಕುರಿತು ಪ್ರತಿಕ್ರಿಯಿಸಿ, ಪೊಲೀಸರು ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವಿಚಾರಣೆ ವೇಳೆ ಅವರು ನಮ್ಮನ್ನು ಕೇಳಿ ಏನನ್ನೂ ಮಾಡುವುದಿಲ್ಲ. ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗಿರುವುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಾರ್ವಜನಿಕರು ಯಾರೂ ಬಂದು ನನಗೆ ದೂರು ಕೊಟ್ಟಿಲ್ಲ. ಆ ಬಗ್ಗೆ ದೂರು ಬಂದಾಗ ನೋಡುತ್ತೇನೆ ಎಂದರು.