ಗೃಹ ಲಕ್ಷ್ಮಿ ಯೋಜನೆ ನಿಯಮದಲ್ಲಿ ಮತ್ತೆ ಬದಲಾವಣೆ, ಮಕ್ಕಳು ತೆರಿಗೆ ಕಟ್ಟಿದರೂ ತಾಯಿಗೆ 2,000 ರೂ ಖಚಿತ!
ಕಾಂಗ್ರೆಸ್ ಉಚಿತ ಗ್ಯಾರೆಂಟಿಗಳಿಗೆ ದಿನಕ್ಕೊಂದು ನಿಯಮ ಸೇರಿಕೊಳ್ಳುತ್ತಿದೆ. ಆದರೂ ಗೊಂದಲ ನಿವಾರಣೆಯಾಗುತ್ತಿದೆ. ನಿನ್ನೆ ತೆರೆಗೆ ಕಟ್ಟುವ ಕುಟಂಬಕ್ಕೆ ಗೃಹಲಕ್ಷ್ಮಿ ಯೋಜನೆ ಸಿಗುವುದಿಲ್ಲ ಎಂದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ನಿಯಮ ಸಡಿಸಿಲಿದ್ದಾರೆ. ಇದೀಗ ಮಕ್ಕಳು ತೆರಿಗೆ ಕಟ್ಟಿದರೂ ತಾಯಿ 2,000 ರೂಪಾಯಿ ಪಡೆಯಲು ಅರ್ಹ ಎಂದಿದ್ದಾರೆ.
ಬೆಂಗಳೂರು(ಜೂ.09): ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರೆಂಟಿ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಕಾ ಪಾಟೀಲ, ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರಿ ಎಂದು ಅಧಿಕಾರಕ್ಕೇರಿದ ಕಾಂಗ್ರೆಸ್ ಇದೀಗ ಒಂದೊಂದೆ ಷರತ್ತು ವಿಧಿಸುತ್ತಿದೆ. ಇದರ ಜೊತೆಗೆ ಗೊಂದಲವನ್ನು ಸೃಷ್ಟಿಸುತ್ತಿದೆ. ಇದೀಗ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಯ ಷರತ್ತಿನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ನಿನ್ನೆ ಮಕ್ಕಳು ತೆರಿಗೆ ಕಟ್ಟಿದರೆ, ತಾಯಿ ಅಥವಾ ಆ ಕುಟುಂಬ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದಿತ್ತು. ಇಂದು ಮತ್ತೆ ಷರತ್ತು ಬದಲಿಸಲಾಗಿದೆ. ಇಂದು ಮಕ್ಕಳು ತೆರಿಗೆ ಕಟ್ಟಿದರೂ, ತಾಯಿ 2,000 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ, ಗೃಹಲಕ್ಷ್ಮಿ ಯೋಜನೆಡಯಿ ತಾಯಿಗೆ 2,000 ರೂಪಾಯಿ ನೀಡಲಾಗುತ್ತದೆ. ಈ ಕುರಿತು ಗೊಂದಲ ಸೃಷ್ಟಿಯಾಗಿತ್ತು. ಈ ಗೊಂದಲ ಪರಿಹರಿಸಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಇದೇ ವೇಳೆ ಗೃಹಲಕ್ಷ್ಮಿ ಫಾರ್ಮ್ ಕುರಿತು ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಫಾರ್ಮ್ ಓಡಾಡ್ತಿರೋದು ಅಸಲಿ. ಇದರಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದೇವೆ. ಇನ್ನೂ ಕೆಲ ಬದಲಾವಣೆ ಮಾಡಲಾಗುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ: ಅರ್ಜಿಯಲ್ಲಿ ಏನಿದೆ ? ಕೊನೆಯ ದಿನಾಂಕ ಯಾವಾಗ ?
ಬ್ಯಾಂಕ್ ಪಾಸ್ ಬುಕ್ ಸೇರಿಸಲಾಗುತ್ತದೆ. ಜಾತಿ ಬದಲು ವರ್ಗ ಎಂದು ಹಾಕುತ್ತೇವೆ. ತಪ್ಪು ಸಂದೇಶ ಹೋಗಬಾರದು ಅನ್ನೋ ಕಾರಣಕ್ಕೆ ಈ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೊಸ ಷರತ್ತಿನ ಪ್ರಕಾರ ಗಂಡ ತೆರಿಗೆ ಕಟ್ಟುತ್ತಿದ್ದರೆ, ಮನೆಯ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ. ಆದರೆ ಮಕ್ಕಳು ತೆರಿಗೆ ಕಟ್ಟಿದರೆ ತಾಯಿಗೆ ಯೋಜನೆ ಫಲಾನುಭವಿಯಾಗಲು ಅರ್ಹ ಎಂದು ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಯೋಜನೆ ಫಲಾನುಭವಿಗಳ ಪೈಕಿ ಶೇಕಡಾ 90 ರಷ್ಟು ಬಿಪಿಎಲ್ ಕಾರ್ಡ್ ಮಹಿಳೆಯರೇ ಪ್ರಮುಖ ಆಗಲಿದ್ದಾರೆ. ಯಾರಿಗೆಲ್ಲಾ ಈ ಯೋಯನೆಯ ಫಲ ಸಿಗಬೇಕು ಅವರನ್ನು ಅರ್ಹರನ್ನಾಗಿ ಪರಿಗಣಿಸಿ ಯೋಜನೆಗೆ ಸೇರಿಸಲಾಗುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಸದ್ಯ ಹೊರಬಂದಿರುವ ಅರ್ಜಿ ಡ್ರಾಫ್ಟ್ ಮಾತ್ರ. ಕೆಲ ಬದಲಾವಣೆಗಳೊಂದಿಗೆ ನೂತನ ಅರ್ಜಿ ಹೊರಬರಲಿದೆ ಎಂದಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯನ್ನು ಅದ್ಧೂರಿ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಲಾಗುತ್ತದೆ. ಆಗಸ್ಟ್ 17 ಅಥವಾ ಆಗಸ್ಟ್ 18 ರಂದು ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದಾರೆ.
ಉಚಿತ ವಿದ್ಯುತ್‌ಗೆ ರಾಜ್ಯದ 2.14 ಕೋಟಿ ಸಂಪರ್ಕಗಳು ಅರ್ಹ: ಸಚಿವ ಕೆ.ಜೆ.ಜಾರ್ಜ್
ಗೃಹ ಲಕ್ಷ್ಮಿ’ ಯೋಜನೆಗೆ ಬೆಳಗಾವಿಯಲ್ಲಿ ಆಗಸ್ಟ್ 17 ಅಥವಾ 18ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಜೂ.2ರಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಗೃಹಲಕ್ಷ್ಮೇ ಯೋಜನೆಗೆ ಫಲಾನುಭವಿಗಳ ಖಾತೆಗೆ ಹಣ ಬೀಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾತಂತ್ರ್ಯ ದಿನಾಚರಣೆ ದಿನ ಅತ್ತ ರಾಷ್ಟ್ರಧ್ವಜ ಹಾರುತ್ತಿದ್ದಂತೆ ಇತ್ತ ಗೃಹಲಕ್ಷ್ಮೇ ಹಣ ಖಾತೆಗೆ ಬೀಳಲಿದೆ ಎಂದಿದ್ದರು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಯೋಜನೆಗೆ ಚಾಲನೆ ನೀಡುವ ದಿನವನ್ನು ಬದಲಿಸುವ ಬಗ್ಗೆ ಚರ್ಚಿಸಲಾಗಿದೆ.