ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರು, ತುಮಕೂರು ಮೆಟ್ರೋ ವಿಸ್ತರಣೆ ಕುರಿತ ಗೊಂದಲ ನಿವಾರಣೆಗೆ ಸಂವಾದಕ್ಕೆ ಆಹ್ವಾನಿಸಿದ್ದು, ಮೆಟ್ರೋವನ್ನು ವಸಂತನರಸಾಪುರದವರೆಗೂ ವಿಸ್ತರಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ಸ್ಥಾಪಿಸಲು ಸರ್ಕಾರವನ್ನು ಒತ್ತಾಯ.

ತುಮಕೂರು (.21): ವರದಿಂದ ತುಮಕೂರುವರೆಗೆ ಮೆಟ್ರೋ ವಿಸ್ತರಣೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರೆ, ಅವರನ್ನು ತುಮಕೂರಿಗೆ ಆಹ್ವಾನಿಸಿ ಸಂವಾದ ನಡೆಸೋಣ ಎಂದು ಮಾಜಿ ಸಂಸದರಾದ ಜಿ.ಎಸ್. ಬಸವರಾಜ್ ಅವರು ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಮನವಿ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿಯೇ ಈ ಬಗ್ಗೆ ಕಡತ ಆರಂಭಿಸಲಾಗಿತ್ತು, ಹೀಗಾಗಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಲಹೆಗಳನ್ನು ಪರಿಗಣಿಸಿ ತುಮಕೂರಿನ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಮೆಟ್ರೋ ವಸಂತರಸಾಪುರದವರೆಗೂ ಬರಲಿ:

ಮಾದಾವರ-ತುಮಕೂರು ಮೆಟ್ರೋ ಯೋಜನೆಗೆ ಸ್ವಾಗತ ಕೋರಿರುವ ಬಸವರಾಜ್, ಭಯದ ದೃಷ್ಟಿಯಿಂದ ಮೆಟ್ರೋವನ್ನು ಕೈಗಾರಿಕಾ ಪ್ರದೇಶವಾದ ವಸಂತನರಸಾಪುರದವರೆಗೂ ವಿಸ್ತರಣೆ ಮಾಡುವುದು ಸೂಕ್ತ, ಎಂದು ಸಲಹೆ ನೀಡಿದ್ದಾರೆ. ಈ ಯೋಜನೆಗೆ ವಿಶೇಷ ಆಸಕ್ತಿ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಶಾಸಕರುಗಳ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದ್ದಾರೆ.

ಮೇಕೆದಾಟು ಮತ್ತು ನೀರಾವರಿ:

ಮೇಕೆದಾಟು ಯೋಜನೆ ಕುರಿತ ನ್ಯಾಯಾಲಯದ ತೀರ್ಪು ರಾಜ್ಯಕ್ಕೆ ಆತ್ಮವಿಶ್ವಾಸ ತಂದಿದೆ ಎಂದಿರುವ ಅವರು, ಕೂಡಲೇ ಪಕ್ಷಾತೀತವಾಗಿ ಪ್ರಧಾನಿ ಮೋದಿ ಅವರ ಬಳಿ ನಿಯೋಗ ತೆರಳಬೇಕೆಂದು ಸಲಹೆ ನೀಡಿದ್ದಾರೆ. ಇದೇ ವೇಳೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ 'ನೀರಿನ ಹೆಜ್ಜೆ' ಪುಸ್ತಕದಲ್ಲಿ ನೀರಾವರಿ ತಜ್ಞ ದಿವಂಗತ ಜಿ.ಎಸ್.ಪರಮಶಿವಯ್ಯ ಅವರ ಶ್ರಮವನ್ನು ಸ್ಮರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಾಜ್ಯದ ಸಮಗ್ರ ನೀರಾವರಿ ಯೋಜನೆಯ ಬಗ್ಗೆ 344 ಜನಪ್ರತಿನಿಧಿಗಳು ಮತ್ತು ತಜ್ಞರ ಅಭಿಪ್ರಾಯ ಒಳಗೊಂಡ ವಸ್ತುನಿಷ್ಠ ವರದಿಯನ್ನು ಹೊರತರುವುದಾಗಿ ಘೋಷಿಸಿದ್ದಾರೆ.

ದೆಹಲಿಯಲ್ಲಿ ವಿದ್ಯಾರ್ಥಿಗಳಿಗೆ ಸೂರು:

ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲು ಜಮೀನು ಮಂಜೂರಾಗಿರುವುದನ್ನು ಸ್ವಾಗತಿಸಿರುವ ಜಿ.ಎಸ್. ಬಸವರಾಜ್, ಇದಕ್ಕಾಗಿ ಶ್ರಮಿಸಿದ ಸಚಿವ ಸತೀಶ್ ಜಾರಕಿಹೊಳೆ ಹಾಗೂ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಅವರು ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕೆಂದು ಮನವಿ ಮಾಡಿದ್ದಾರೆ.