ಬೆಂಗಳೂರು: ಮೊದಲ ದಿನವೇ ಗೃಹಲಕ್ಷ್ಮೀಗೆ ಸರ್ವರ್ ಕಿರಿಕಿರಿ, ತಾಂತ್ರಿಕ ತಡೆ
ಗೃಹ ಲಕ್ಷ್ಮೇ ಯೋಜನೆಯ ನೋಂದಣಿಗೆ ಅವಕಾಶ ನೀಡಿದ ಮೊದಲ ದಿನವೇ ಬೆಂಗಳೂರಿನ ವಿವಿಧ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳಿಗೆ ಗೊಂದಲಗಳು ಉಂಟಾಗಿದ್ದು, ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಯಿತು.
ಬೆಂಗಳೂರು (ಜು.21) : ಗೃಹ ಲಕ್ಷ್ಮೇ ಯೋಜನೆಯ ನೋಂದಣಿಗೆ ಅವಕಾಶ ನೀಡಿದ ಮೊದಲ ದಿನವೇ ಬೆಂಗಳೂರಿನ ವಿವಿಧ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳಿಗೆ ಗೊಂದಲಗಳು ಉಂಟಾಗಿದ್ದು, ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಯಿತು.
ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಮನೆಯೊಡತಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುವ ಗೃಹ ಲಕ್ಷ್ಮೇ ಯೋಜನೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದರು.
ಬ್ರ್ಯಾಂಡ್ ಬೆಂಗಳೂರು’ ಅಭಿಯಾನ: 70 ಸಾವಿರಕ್ಕೂ ಅಧಿಕ ಜನರ ಸಲಹೆ!
ಈ ಸಂಬಂಧ ಗುರುವಾರದಿಂದ ಯಾರಾರಯರ ಮೊಬೈಲ್‌ಗಳಿಗೆ ಸಂದೇಶ (ನೋಂದಣಿ ಸಮಯ ಹಾಗೂ ನೋಂದಣಿ ಕೇಂದ್ರದ ವಿಳಾಸ) ಬಂದಿದೆಯೋ ಅಂತಹವರು ನಿಗದಿತ ಸಮಯಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿತ್ತು.
ಆದರೆ ಮಲ್ಲೇಶ್ವರ, ಶಾಂತಿನಗರ, ಕೆ.ಆರ್. ಪುರ, ಹೆಬ್ಬಾಳ ಕೆಂಪಾಪುರ ಸೇರಿದಂತೆ ಹಲವು ಬೆಂಗಳೂರು ಒನ್ ಕೇಂದ್ರಗಳಲ್ಲಿ ಮೊಬೈಲ್ ಸಂದೇಶವಿಲ್ಲದೆ ನೋಂದಣಿಗೆ ಹಲವು ಮಹಿಳೆಯರು ಸಾಲುಗಟ್ಟಿನಿಂತಿದ್ದರು. ಇನ್ನು ಎಲ್ಲವೂ ಸರಿ ಇದ್ದರೂ ರಾಜ್ಯಾದ್ಯಂತ ನೋಂದಣಿ ಪ್ರಮಾಣ ಹೆಚ್ಚಾಗಿ ಕೆಲ ಕಾಲ ಸರ್ವರ್ ಸಮಸ್ಯೆಯೂ ಉಂಟಾಯಿತು.
ಈ ವೇಳೆ ಸಂದೇಶ ಬಂದಿರುವವರಿಗೆ ಮಾತ್ರ ನೋಂದಣಿ ಅವಕಾಶ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಮೊದಲೇ ಯಾಕೆ ಹೇಳಿಲ್ಲ ಎಂದು ಮಾಹಿತಿ ಕೊರತೆಯಿದ್ದ ಮಹಿಳೆಯರು ಸಿಬ್ಬಂದಿ ಜತೆ ವಾದಕ್ಕೆ ಇಳಿದರು.
ಈ ವೇಳೆ ಸಿಬ್ಬಂದಿ ಸಲಹೆ ಮೇರೆಗೆ 1902ಗೆ ಕರೆ ಮಾಡಿ ಹಾಗೂ 8147500500 ಸಂಖ್ಯೆಗೆ ಪಡಿತರ ಸಂಖ್ಯೆ ಸಂದೇಶ ಕಳುಹಿಸಿದರೂ ಮಹಿಳೆಯರಿಗೆ ಇಲಾಖೆಯಿಂದ ಮೆಸೇಜು ಬಂದಿಲ್ಲ. ಇನ್ನು ಮೆಸೇಜು ಬಂದವರಿಗೆ ಬೇರೆ ನೋಂದಣಿ ಕೇಂದ್ರ ಹಾಗೂ ಸಮಯ ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಆ ಕ್ಷಣದಲ್ಲಿ ಅವರಿಗೆ ನೋಂದಣಿ ಅವಕಾಶ ನಿರಾಕರಿಸಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಮಂಗಳೂರು: ಪಡಿತರ ಚೀಟಿಗೆ ಹೆಸರು ಸೇರಿಸಲಾಗದೆ ಪರದಾಟ
ಇನ್ನು ಕೆಲವು ಬೆಂಗಳೂರು ವಾಸಿಗಳಿಗೆ ಸ್ವಂತ ಊರುಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸಂದೇಶ ಬಂದಿದ್ದರಿಂದಲೂ ಕಿರಿ ಕಿರಿ ಉಂಟಾಯಿತು.
ಮಲ್ಲೇಶ್ವರ ಬೆಂಗಳೂರು ಒನ್ ಕೇಂದ್ರದ ಬಳಿ ಮಹಿಳೆಯೊಬ್ಬರು, ಬೆಂಗಳೂರಲ್ಲಿ 10 ವರ್ಷದಿಂದ ಪಡಿತರ ಪಡೆಯುತ್ತಿದ್ದೇನೆ. ಶಿವಮೊಗ್ಗಕ್ಕೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಸಂದೇಶ ಬಂದಿದೆ. ಮಧ್ಯಾಹ್ನ 12 ರಿಂದ 1 ಗಂಟೆ ನಡುವೆ ಹೋಗುವಂತೆÜಯೂ ಹೇಳಿದ್ದಾರೆ. ಬೆಂಗಳೂರಿಂದ ಶಿವಮೊಗ್ಗ ಹೋಗಲು 5 ರಿಂದ 6 ಗಂಟೆ ಬೇಕು. ಅಲ್ಲಿಗೆ ಹೋಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಶ್ನಿಸುತ್ತಿದ್ದರು.
ಆದರೆ, ನಿಗದಿತ ಸಮಯದಲ್ಲಿ ಸೇವಾ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದವರು ಮುಂದಿನ ಯಾವುದೇ ದಿನ ಸಂಜೆ 5 ಗಂಟೆಯಿಂದ ಸಂಜೆ 7 ಗಂಟೆ ನಡುವೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಇಲಾಖೆ ಮೊದಲೇ ತಿಳಿಸಿದೆ. ಈ ಮಾಹಿತಿ ಬಹುತೇಕ ಮಹಿಳೆಯರಿಗೆ ಇಲ್ಲದ ಕಾರಣ ಗೊಂದಲಗಳು ಉಂಟಾದವು.