ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ ಆ.30ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದು ಅದೇ ದಿನ ಗದಗ ನಗರದ ಪಂ.ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಚಾಲನೆ ನೀಡಲಾಗುವುದು ಎಂದು ಸಚಿವ ಎಚ್‌ಕೆ ಪಾಟೀಲ್ ತಿಳಿಸಿದರು

ಗದಗ (ಆ.29) :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ ಆ.30ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದು ಅದೇ ದಿನ ಗದಗ ನಗರದ ಪಂ.ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಮಧ್ಯಾಹ್ನ 12 ಕ್ಕೆ ಚಾಲನೆ ನೀಡಲಾಗುವದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಅವರು ಸೋಮವಾರ ಬೆಟಗೇರಿಯ ಗಾಂಧಿ ನಗರದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಗೃಹ ಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 214923 ಫಲಾನುಭವಿಗಳು ನೋಂದಣಿ ಮಾಡಿಕೊಂಡಿರುತ್ತಾರೆ. ಅಂದಾಜು ಹನ್ನೆಡು ಸಾವಿರ ಫಲಾನುಭವಿಗಳ ನೋಂದಣಿ ಕಾರ್ಯವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಇವುಗಳನ್ನು ಕೂಡ ನೋಂದಣಿ ಮಾಡಲು ಕ್ರಮ ವಹಿಸಲು ಸೂಚಿಸಲಾಗಿದೆ.

ಗೃಹ ಲಕ್ಷ್ಮೀ ನೋಂದಣಿಯಲ್ಲಿ ಹಾವೇರಿ ಜಿಲ್ಲೆ ಫಸ್ಟ್‌

ಸರ್ಕಾರದ ಈ ಮಹಾತ್ವಾಕಾಂಕ್ಷೆ ಯೋಜನೆ ಜಾರಿಯಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸ್ವಾಭಿಮಾನದ ಜೀವನ ನಡೆಸಲು ಮುನ್ನುಡಿ ದೊರಕಿದಂತಾಗುತ್ತದೆ. ಅಲ್ಲದೇ ಬಡಕುಟುಂಬಗಳ ಆರ್ಥಿಕ ಅಡಚಣೆ ನಿವಾರಣೆಗೆ ತುಂಬಾ ಉಪಯುಕ್ತವಾಗಿದ್ದು. ಈ ಯೋಜನೆ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಕುಟುಂಬಗಳಿಗೆ ವಾರ್ಷಿಕ 50-60 ಸಾವಿರ ಆರ್ಥಿಕ ಸಹಾಯ ದೊರೆಯುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯದ 1.4 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬರಲಿವೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಗರೀಬಿ ಹಟಾವೋ ಆಗಲಿದೆ ಎಂದರು.

ಸರ್ಕಾರಕ್ಕೆ ನೂರು ದಿನ:

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯುವ ಮೂಲಕ ನೂರು ದಿನ ಯಶಸ್ವಿಯಾಗಿ ಪೂರೈಸಿದೆ. ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದಾಗಿನಿಂದ ನಲವತ್ತು ಕೋಟಿ ಮಹಿಳಾ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುತ್ತಾರೆ. ಇದು ದೇಶದಲ್ಲಿಯೇ ಕ್ರಾಂತಿಕಾರಕ ಬದಲಾವಣೆಯಾಗಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಶೇ.93 ರಷ್ಟು, ಅನ್ನಭಾಗ್ಯ ಯೋಜನೆಯಡಿ ಶೇ.98 ರಷ್ಟು ಗುರಿ ಸಾಧನೆಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿದೆ ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಎಸ್ಪಿ ಬಿ.ಎಸ್.ನೇಮಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣಗು ಗೊಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಉಪಸ್ಥಿತರಿದ್ದರು.

ಶಕ್ತಿ ಯೋಜನೆಯ ಉಚಿತ ಬಸ್‌ಗಳನ್ನು ಕಿತ್ತುಕೊಂಡ ಗೃಹಲಕ್ಷ್ಮಿ:ನಾಳೆ ಊರಿಗೆ ಹೋಗೋರಿದ್ರೆ ಕ್ಯಾನ್ಸಲ್‌ ಮಾಡಿ