ಗೃಹಜ್ಯೋತಿ’ ಅರ್ಜಿ ಸಲ್ಲಿಕೆಯ ತಾಂತ್ರಿಕ ಸಮಸ್ಯೆ 2ನೇ ದಿನವಾದ ಸೋಮವಾರವೂ ಮುಂದುವರಿದಿದೆ. ರಾಜ್ಯದೆಲ್ಲೆಡೆ ವೆಬ್‌ಸೈಟ್‌ ಸರ್ವರ್‌, ಸೇವಾಸಿಂಧು ಪೋರ್ಟಲ್‌ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಹಲವೆಡೆ ಜನ ಬೇಸರಗೊಂಡು ವಾಪಸ್‌ ತೆರಳಿದ್ದು ಕಂಡು ಬಂತು. ಆದರೆ ತಾಂತ್ರಿಕ ಸಮಸ್ಯೆ ನಡುವೆಯೂ ಸೋಮವಾರ 1 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು (ಜೂ.20) ‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆಯ ತಾಂತ್ರಿಕ ಸಮಸ್ಯೆ 2ನೇ ದಿನವಾದ ಸೋಮವಾರವೂ ಮುಂದುವರಿದಿದೆ. ರಾಜ್ಯದೆಲ್ಲೆಡೆ ವೆಬ್‌ಸೈಟ್‌ ಸರ್ವರ್‌, ಸೇವಾಸಿಂಧು ಪೋರ್ಟಲ್‌ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಹಲವೆಡೆ ಜನ ಬೇಸರಗೊಂಡು ವಾಪಸ್‌ ತೆರಳಿದ್ದು ಕಂಡು ಬಂತು. ಆದರೆ ತಾಂತ್ರಿಕ ಸಮಸ್ಯೆ ನಡುವೆಯೂ ಸೋಮವಾರ 1 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು, ಎಸ್ಕಾಂಗಳ ಪ್ರಾದೇಶಿಕ ಕಚೇರಿಗಳು, ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌, ನಾಡಕಚೇರಿಗಳಿಗೆ ಬೆಳಗ್ಗೆಯೆ ಜನರು ಅರ್ಜಿ ಸಲ್ಲಿಸಲು ಆಗಮಿಸಿದ್ದರು. ಕೆಲವೆಡೆ ಜನರಿಗೆ ತೊಂದರೆಯಾಗದಿರಲಿ ಎಂದು ಅಧಿಕಾರಿಗಳು, ಸಿಬ್ಬಂದಿ ನಿಗದಿತ ಅವಧಿಗೂ ಮುನ್ನವೇ ಕಚೇರಿಯಲ್ಲಿದ್ದರು. ಆದರೆ, ಬೆಳಗ್ಗೆಯೇ ವೆಬ್‌ಸೈಟ್‌ ಆರಂಭದಲ್ಲೇ ಕೈಕೊಟ್ಟಿತು. ಒಂದು ಅರ್ಜಿ ಸಲ್ಲಿಕೆಗೆ ವಿಪರೀತ ಸಮಯ ತೆಗೆದುಕೊಳ್ಳುತ್ತಿತ್ತು.

ಫ್ರೀ ಟಿಕೆಟ್‌ ರಿಸರ್ವೇಶನ್‌ ಒತ್ತಡಕ್ಕೆ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಕ್ರ್ಯಾಶ್‌: ಹಣ ಕಡಿತವಾಗುತ್ತೆ, ಬುಕಿಂಗ್‌ ಆಗಲ್ಲ

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಎರಡು ಕಡೆ ಅರ್ಜಿ ಸಲ್ಲಿಸಲು ಬಂದಿದ್ದ ಜನತೆ ಗಂಟೆಗಳ ಕಾಲ ನಿಲ್ಲುವಂತಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸರದಿ ಸಾಲು ಮಧ್ಯಾಹ್ನದವರೆಗೆ ಹೆಚ್ಚುತ್ತಲೆ ಇತ್ತು. ಇದರಿಂದ ಜನತೆ ಆಕ್ರೋಶ ವ್ಯಕ್ತಪಡಿಸಿದರು. ವೆಬ್‌ಸೈಟ್‌ನಲ್ಲಿ ಯಾವುದೇ ನೋಂದಣಿ ಆಗದ ಕಾರಣ ಸಿಬ್ಬಂದಿಯೂ ಪರದಾಡಿದರು. ಜನತೆಯಿಂದ ದಾಖಲೆ ನೀಡುವಂತೆ ಹೇಳಿ ಸರ್ವರ್‌ ಸರಿಯಾದ ಬಳಿಕ ನಾವೇ ಕರೆ ಮಾಡಿ ತಿಳಿಸುವುದಾಗಿ ಹೇಳಿದರು.

ರಾಜಾಜಿನಗರದ ಎರಡನೇ ಬ್ಲಾಕ್‌ನ ಬೆಸ್ಕಾಂ ಕಚೇರಿಗೆ ಗೃಹಜ್ಯೋತಿ ಅರ್ಜಿ ಸಲ್ಲಿಸಲು ಬಂದವರು ಒಂದು ಕ್ಷಣ ಅವಾಕ್ಕಾಗಿದ್ದರು. 1 ಗಂಟೆಯಾದರೂ ಕಚೇರಿಯ ಅರ್ಜಿ ಸಲ್ಲಿಕೆಯ ಕೌಂಟರ್‌ನಲ್ಲಿ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಅರ್ಜಿ ಹಾಕಲು ಬಂದಿದ್ದವರು ಅಧಿಕಾರಿಗಳಿಗೆ ಬೈದುಕೊಂಡು ವಾಪಸ್‌ ತೆರಳುತ್ತಿದ್ದುದು ಕಂಡುಬಂತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿ, ಸರ್ವರ್‌ ಡೌನ್‌ ಇದ್ದ ಕಾರಣ ಗ್ರಾಹಕರಿಗೆ ಬೇರೆ ಶಾಖಾ ಕಚೇರಿ, ಬೆಂಗಳೂರು ಒನ್‌ ಬಳಿ ಹೋಗಲು ಹೇಳಿದ್ದೆವು. ನೆಟ್‌ವರ್ಕ್ ತೊಂದರೆಯಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಸಲಾಗುತ್ತಿಲ್ಲ ಎಂದು ತಿಳಿಸಿದರು.

ಅರ್ಜಿ ಸಲ್ಲಿಕೆ ಸಂಖ್ಯೆ ದುಪ್ಪಟ್ಟು

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ ನಡುವೆಯೂ ಮಂಗಳವಾರ ರಾಜ್ಯದಲ್ಲಿ 1,06,958 ಜನ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ವೆಬ್‌ಸೈಟ್‌ ಸರ್ವರ್‌ ಸೇವಾಸಿಂಧು ಪೋರ್ಟಲ್‌ ಸಮಸ್ಯೆ ಸೋಮವಾರವೂ ಮುಂದುವರಿದಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ ಸೇರಿದಂತೆ ಎರಡು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 1,61,958 ಜನರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಅರ್ಜಿ ಸಲ್ಲಿಸಿದವರ ಸಂಖ್ಯೆ ದುಪ್ಪಟ್ಟಾಗಿದೆ.

ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್‌ ಬೆಲೆ ಏರಿಕೆ ಶಾಕ್! ಬಿಲ್‌ ದುಪ್ಪಟ್ಟು ಬರಲು ಇಲ್ಲಿದೆ ಕಾರಣ