ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಗೆ ಬಂದು ಆರು ದಿನಗಳಾಗಿವೆ. ಅದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಮತ್ತು ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳ ಸರ್ವರ್‌ ಡೌನ್‌ ಆಗಿದೆ. ಬ್ಯಾಂಕ್‌ನಿಂದ ಹಣ ಕಡಿತಗೊಂಡರೂ ಟಿಕೆಟ್‌ ಬುಕ್‌ ಆಗುತ್ತಿಲ್ಲ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜೂ.17): ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಗೆ ಬಂದು ಆರು ದಿನಗಳಾಗಿವೆ. ಅದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಮತ್ತು ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳ ಸರ್ವರ್‌ ಡೌನ್‌ ಆಗಿದೆ. ಬ್ಯಾಂಕ್‌ನಿಂದ ಹಣ ಕಡಿತಗೊಂಡರೂ ಟಿಕೆಟ್‌ ಬುಕ್‌ ಆಗುತ್ತಿಲ್ಲ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆ ಜಾರಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಈ ಹಿಂದಿಗಿಂತ ಸರ್ಕಾರಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಸಾಮಾನ್ಯ ಬಸ್‌ಗಳಿಗೆ ಮಹಿಳೆಯರಿಗೆ ಟಿಕೆಟ್‌ ಬುಕ್‌ ಮಾಡಲು ಕೆಎಸ್‌ಆರ್‌ಟಿಸಿ ವೆಬ್‌/ಆ್ಯಪ್‌ನಲ್ಲಿ ಅವಕಾಶ ನೀಡಲಾಗಿದೆ. ಇಲ್ಲಿ 20 ರು. ಬುಕ್ಕಿಂಗ್‌ ಶುಲ್ಕ ಪಾವತಿಸಿ ಮಹಿಳೆಯರು ಟಿಕೆಟ್‌ ಬುಕ್‌ ಮಾಡಬಹು​ದಾ​ಗಿ​ದೆ. ಉಚಿತ ಪ್ರಯಾಣ ಯೋಜ​ನೆ​ಯತ್ತ ಆಕ​ರ್ಷಿ​ತ​ರಾಗಿ ಒಂದೇ ಬಾರಿಗೆ ಬಹಳಷ್ಟು ಜನ ಟಿಕೆಟ್‌ ಬುಕ್‌ ಮಾಡಲು ಮುಂದಾಗಿದ್ದರಿಂದ ಸರ್ವರ್‌ ಡೌನ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಜು.1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನ: ಡಿ.ಕೆ.ಶಿವಕುಮಾರ್‌

ಪ್ರಯಾ​ಣಿ​ಕರ ಅಳ​ಲು: ಈ ಕುರಿತು ಪ್ರಯಾ​ಣಿ​ಕರು ಟ್ವೀಟರ್‌ನಲ್ಲಿ ಕೆಎಸ್‌ಆರ್‌ಟಿಸಿ ಖಾತೆಗೆ ಟ್ಯಾಗ್‌ ಮಾಡಿ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ. ಕಳೆದ 2 ದಿನಗಳಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಹಾಗೂ ಮೊಬೈಲ್‌ ಬುಕ್ಕಿಂಗ್‌ ಆ್ಯಪ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಲು ಆಗುತ್ತಿಲ್ಲ. ಬ್ಯಾಂಕ್‌ ಅಕೌಂಟ್‌ನಿಂದ ಹಣ ಕಡಿತಗೊಳ್ಳುತ್ತಿದ್ದರೂ ಟಿಕೆಟ್‌ ಮಾತ್ರ ಬುಕ್‌ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಕೆಲವರು ಬುಕ್ಕಿಂಗ್‌ನ ರೆಫರೆನ್ಸ್‌ ಸಂಖ್ಯೆಯನ್ನು ಹಾಕಿ, ‘ಟಿಕೆಟ್‌ ಬುಕ್‌ ಆಗದಿದ್ದರೂ ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಂಡಿದೆ. ರೀಫಂಡ್‌ ಮಾಡಿ’ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತಿಕ್ರಿಯಿಸಿದ್ದು ‘ನಿಮ್ಮ ಹಣ ಕಡಿತಗೊಂಡಿದ್ದರೆ 5-7 ಬ್ಯಾಂಕ್‌ ವ್ಯವಹಾರಗಳ ದಿನಗಳಲ್ಲಿ ವಾಪಸ್‌ ನಿಮ್ಮ ಖಾತೆಗೆ ಹಣ ಬರಲಿದೆ. ತಾಂತ್ರಿಕ ಕಾರಣಗಳಿಂದ ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿಲ್ಲ. ಅಡಚಣೆಗಾಗಿ ವಿಷಾದಿಸುತ್ತೇವೆ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ’ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು 4 ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದ್ದು, ಅವರ ಬ್ಯಾಂಕ್‌ ಖಾತೆಯಿಂದ ಟಿಕೆಟ್‌ ಮೊತ್ತದಷ್ಟು ಹಣ ಕಡಿತಗೊಂಡಿದೆ. ಆದರೆ, ಟಿಕೆಟ್‌ ಬುಕ್ಕಿಂಗ್‌ ಯಶಸ್ವಿಯಾಗಿಲ್ಲ, ಫೇಲ್‌ ಎಂದು ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಟ್ವೀಟರ್‌ ಖಾತೆ ಟ್ಯಾಗ್‌ ಮಾಡಿ ಸಮಸ್ಯೆ ಹಂಚಿಕೊಂಡಿದ್ದಾರೆ. ಅವರಿಗೂ ಕೂಡ 5-7 ದಿನಗಳಲ್ಲಿ ಹಣ ರೀಫಂಡ್‌ ಆಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಉತ್ತರಿಸಿದೆ. ಇನ್ನು ಕೆಲವರು ಕೆಎಸ್‌ಆರ್‌ಟಿಸಿ ಬುಕ್ಕಿಂಗ್‌ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಇತರೆ ಖಾಸಗಿ ಬಸ್‌ ಬುಕ್ಕಿಂಗ್‌ ವ್ಯವಸ್ಥೆಯಿಂದ ಕಲಿಯಿರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕೃಷಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ಚಲುವರಾಯಸ್ವಾಮಿ

ಶಕ್ತಿ ಯೋಜನೆಗೆ ಸಂಬಂಧವಿಲ್ಲ - ಕೆಎ​ಸ್ಸಾ​ರ್ಟಿ​ಸಿ: ಶಕ್ತಿ ಯೋಜನೆಗೂ ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ ಕೆಲಸ ಮಾಡದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಶುಕ್ರವಾರ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಮೊಬೈಲ್‌ ಆ್ಯಪ್‌ನಲ್ಲಿ ಬುಕಿಂಗ್‌ ಮಾಡಲು ತಾಂತ್ರಿಕ ದೋಷದಿಂದ ಸಮಸ್ಯೆಯುಂಟಾಗಿತ್ತು. ಪ್ರಸ್ತುತ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.