ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 'ಗೃಹಲಕ್ಷ್ಮಿ' ಯೋಜನೆಯಡಿ ಮೃತಪಟ್ಟ 6,624 ಮಹಿಳೆಯರ ಖಾತೆಗೆ ಹಣ ಜಮಾ ಆಗಿರುವುದು. 4,800 ತೆರಿಗೆ ಪಾವತಿದಾರರು ಫಲಾನುಭವಿಗಳು ಪತ್ತೆ. ಈ ಹಿನ್ನೆಲೆ, ಆಧಾರ್ ಸೀಡಿಂಗ್ ಮಾಡದವರೂ ಸೇರಿದಂತೆ ಒಟ್ಟು 12,719 ಅನರ್ಹ ಮಹಿಳೆಯರನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ರಾಮನಗರ (ಜೂ.10): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ(Congress guarantee schemes)ಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ(Gruhalakshmi scheme)’ ಯೋಜನೆಯ ಫಲಾನುಭವಿಗಳಲ್ಲಿ ಮೃತರಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಬೆಂಗಳೂರು ದಕ್ಷಿಣ(Bengaluru south) ಜಿಲ್ಲೆಯೊಂದರಲ್ಲೇ ಈವರೆಗೆ 6,624 ಮೃತರ ಖಾತೆಗೆ ಯೋಜನೆಯ ಹಣ ಜಮಾ ಆಗಿರುವುದು ಪತ್ತೆಯಾಗಿದೆ. ಜೊತೆಗೆ, ಐಟಿ-ಜಿಎಸ್ ಟಿ ಪಾವತಿಸುತ್ತಿರುವ 4,800 ಮಹಿಳೆಯರೂ ಯೋಜನೆಯ ಫಲಾನುಭವಿಗಳಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟು 12,719 ‘ಗೃಹಲಕ್ಷ್ಮಿ’ಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. 2023ರ ಆಗಸ್ಟ್‌ನಿಂದ ಯೋಜನೆ ಆರಂಭವಾಗಿದ್ದು, ಜಿಲ್ಲೆಯ 2,82,030 ನಾರಿಯರು ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.
ಇವರಲ್ಲಿ ಅನೇಕರು ಮೃತಪಟ್ಟಿದ್ದು, ಅವರ ಖಾತೆಗೂ ಹಣ ಸಂದಾಯವಾಗುತ್ತಿತ್ತು. ಇದನ್ನು ತಡೆಯುವ ಉದ್ದೇಶದಿಂದ ಯೋಜನೆಯ ಅನುಷ್ಠಾನದ ಹೊಣೆ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೃತ ಫಲಾನುಭವಿಗಳ ಪತ್ತೆ ಕಾರ್ಯ ಆರಂಭಿಸಿತ್ತು. ಸದ್ಯಕ್ಕೆ ಜಿಲ್ಲೆಯಲ್ಲಿ ಫಲಾನುಭವಿಗಳಾಗಿದ್ದ 6,624 ಮಹಿಳೆಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಫಲಾನುಭವಿಗಳ ಪೈಕಿ ಮೃತಪಟ್ಟಿರುವವರ ಸಂಖ್ಯೆ ಕನಕಪುರದಲ್ಲೇ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ ಈ ತಾಲೂಕಿನಲ್ಲಿ 3,058 ಮಂದಿ ಕೊನೆಯುಸಿರೆಳೆದಿದ್ದಾರೆ.
‘ಮೃತ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಹಣವನ್ನು ಹಿಂಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿ, ಯೋಜನೆ ದುರುಪಯೋಗ ಆಗುವುದನ್ನು ತಪ್ಪಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜೆ.ಆರ್.ದಿನೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಒಟ್ಟೂ 12,719 ಮಹಿಳೆಯರು ಪಟ್ಟಿಯಿಂದ ಹೊರಕ್ಕೆ:
ಈ ಮಧ್ಯೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸುತ್ತಿರುವ 4,800 ಮಹಿಳೆಯರು ಯೋಜನೆಯ ಫಲಾನುಭವಿಗಳಾಗಿರುವುದು ಪತ್ತೆಯಾಗಿದ್ದು, ಅವರ ಹೆಸರನ್ನೂ ಪಟ್ಟಿಯಿಂದ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಗೃಹಲಕ್ಷ್ಮಿ ಸೌಲಭ್ಯಕ್ಕೆ ಅರ್ಹರಿದ್ದರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡದ 1,295 ಮಹಿಳೆಯರು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಮಾಡದ 1,295, ಮೃತಪಟ್ಟಿರುವ 6,624 ಹಾಗೂ ಜಿಟಿ- ಜಿಎನ್‌ಟಿ ಪಾವತಿದಾರರಾಗಿರುವ 4,800 ಸೇರಿ ಒಟ್ಟು 12,719 ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡಲಾಗಿದೆ.
ಅನಾರೋಗ್ಯ, ಅಪಘಾತ, ವಯೋಸಹಜ ಸಾವು ಸೇರಿದಂತೆ ಹಲವು ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ 6,624 ಫಲಾನುಭವಿಗಳು ಮೃತಪಟ್ಟಿದ್ದಾರೆ. ಇದರಲ್ಲಿ 1,777 ಮಂದಿ ಹೆಸರನ್ನು ಯೋಜನೆಯಿಂದ ಕೈಬಿಡಲಾಗಿದ್ದು, ಬಾಕಿ 4,847 ಮಂದಿ ಹೆಸರನ್ನು ತೆಗೆಯಲು ಕ್ರಮ ವಹಿಸಲಾಗಿದೆ. ಮೃತರ ಬ್ಯಾಂಕ್ ಖಾತೆಗೆ ಹಣ ಹೋಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ, ಬೆಂ.ದಕ್ಷಿಣ ಜಿಲ್ಲೆ.
ಮೃತ ಫಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಂಗ್ರಹಿಸಿ ನೀಡುತ್ತಾರೆ. ಜೊತೆಗೆ ಇಲಾಖೆಯ ಕೇಂದ್ರ ಕಚೇರಿಯಿಂದಲೂ ಮರಣ ಪ್ರಮಾಣಪತ್ರ ಮಾಹಿತಿ ಆಧರಿಸಿ ನಮಗೆ ಮೃತರ ಮಾಹಿತಿ ಕಳಿಸುತ್ತಾರೆ. ಅಂತಹ ಹೆಸರುಗಳನ್ನು ಸ್ಥಳೀಯವಾಗಿ ಸಂಗ್ರಹಿಸಿರುವ ಮಾಹಿತಿ ಜೊತೆಗೆ ತಾಳೆ ನೋಡಿ ಅಂತಿಮವಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಹೆಸರು ತೆಗೆಯುತ್ತೇವೆ.
- ಜೆ.ಆರ್.ದಿನೇಶ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂ.ದಕ್ಷಿಣ ಜಿಲ್ಲೆ.
ಫಲಾನುಭವಿಗಳಲ್ಲಿ 6,624 ಮೃತರು, 4,800 ತೆರಿಗೆ ಪಾವತಿದಾರರು, 1295 ಆಧಾರ್ ಲಿಂಕ್ ಮಾಡದವರು । ಎಲ್ಲರೂ ಔಟ್
ಪತ್ತೆ ಆಗಿದ್ದು ಹೇಗೆ?
- ಗೃಹಲಕ್ಷ್ಮಿ ಯೋಜನೆ ಮೂಲಕ ಮಾಸಿಕ 2000 ರು. ಹಣ ಮಹಿಳೆಯರಿಗೆ 2023ರ ಆಗಸ್ಟ್‌ನಿಂದ ಸಂದಾಯ.
- ಆದರೆ ಯೋಜನೆ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನ. ಮಹಿಳಾ ಇಲಾಖೆಯಿಂದ ಇತ್ತೀಚೆಗೆ ಪರಿಶೀಲನೆ.
- ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ನಿಯೋಜಿಸಿ ಅವರ ಮೂಲಕ ಫಲಾನುಭವಿಗಳ ಮಾಹಿತಿ ಸಂಗ್ರಹ.
- ಈ ವೇಳೆ ಮೃತಪಟ್ಟವರು, ಐಟಿ-ಜಿಎಸ್‌ಟಿ ಪಾವತಿದಾರರು, ಆಧಾರ್ ಸೀಡ್ ಮಾಡದ ಫಲಾನುಭವಿಗಳು ಪತ್ತೆ.
- ಮೃತ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಹಣ ಹಿಂಪಡೆಯಲು ಕ್ರಮ: ಅಧಿಕಾರಿಗಳ ಹೇಳಿಕೆ.
ಎಂ.ಅಫ್ರೋಜ್ ಖಾನ್


