ಗ್ರೀನ್‌ ಕಾರಿಡಾರ್‌ನಲ್ಲಿ ದೇಶದಲ್ಲೇ ಮೊದಲ ಪ್ಲಾಸ್ಮಾ ಬೆಂಗಳೂರಿಂದ ರವಾನೆ!

ಗ್ರೀನ್‌ ಕಾರಿಡಾರ್‌ನಲ್ಲಿ ದೇಶದಲ್ಲೇ ಮೊದಲ ಪ್ಲಾಸ್ಮಾ ಬೆಂಗಳೂರಿಂದ ರವಾನೆ| 348 ಕಿ.ಮೀ. ದೂರದ ಚೆನ್ನೈನ ಆಸ್ಪತ್ರೆಗೆ 4.50 ಗಂಟೆಯಲ್ಲಿ ಪ್ಲಾಸ್ಮಾ

Green corridor created to transport plasma from Bengaluru to Chennai

ಬೆಂಗಳೂರು(ಆ.04): ದೇಶದಲ್ಲೇ ಮೊದಲ ಬಾರಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅಂತರ್‌ ರಾಜ್ಯ ಪ್ಲಾಸ್ಮಾ ಸಾಗಣೆ ಮಾಡಿದ್ದು, ಭಾನುವಾರ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಿಂದ ಗ್ರೀನ್‌ ಕಾರಿಡಾರ್‌ (ಜೀರೋ ಟ್ರಾಫಿಕ್‌) ಮೂಲಕ 348 ಕಿ.ಮೀ. ದೂರದ ಚೆನ್ನೈನ ಖಾಸಗಿ ಆಸ್ಪತ್ರೆಗೆ 4.50 ಗಂಟೆಯಲ್ಲಿ ಪ್ಲಾಸ್ಮಾ ತಲುಪಿಸಲಾಗಿದೆ.

ಕೊರೋನಾ ಸೋಂಕು ತಗುಲಿ ಗಂಭೀರ ಹಂತದಲ್ಲಿರುವ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯಿಂದ ರಾಜ್ಯದಲ್ಲಿ ಇಬ್ಬರು ಚೇತರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೇರಿತರಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧೆಗೆ ಬೆಂಗಳೂರಿನಿಂದ ಪ್ಲಾಸ್ಮಾ ತರಿಸಿಕೊಳ್ಳಲಾಗಿದೆ.

ಹುಬ್ಬಳ್ಳಿ: 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ, ಗುಣಮುಖ

ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ಚೆನ್ನೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಕೊರೋನಾ ಸೋಂಕು ಹಾಗೂ ತೀವ್ರ ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ವೃದ್ಧೆಗೆ ಪ್ಲಾಸ್ಮಾ ಥೆರಪಿ ಮಾಡಲು ಕುಟುಂಬದ ಸದಸ್ಯರು ನಿರ್ಧರಿಸಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ಪ್ಲಾಸ್ಮಾಗಾಗಿ (ಕೊನ್ವಾಲ್ಸೆಂಟ್‌ ಪ್ಲಾಸ್ಮಾ) ಮನವಿ ಸಲ್ಲಿಸಿದರು.

ಕೂಡಲೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ವೈದ್ಯರು ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೊರೋನಾದಿಂದ ಗುಣಮುಖನಾದ ವ್ಯಕ್ತಿಯಿಂದ ಪ್ಲಾಸ್ಮಾ ಪಡೆದಿದ್ದಾರೆ. ಪ್ಲಾಸ್ಮಾ ಪಡೆದ ಬಳಿಕ ಸಂಜೆ 5 ಗಂಟೆಗೆ ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಮೂಲಕ ಎಚ್‌ಸಿಜಿ ಆಸ್ಪತ್ರೆ ತಂಡವು ಹೊಸೂರುವರೆಗೂ ಪ್ಲಾಸ್ಮಾ ತಲುಪಿಸಿದೆ. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯವರು ಪ್ಲಾಸ್ಮಾ ಪಡೆದಿದ್ದು, ರಾತ್ರಿ 9.30ಕ್ಕೆ ಆಸ್ಪತ್ರೆಗೆ ಪ್ಲಾಸ್ಮಾ ತಲುಪಿದೆ. ಈವರೆಗೂ ಹೃದಯ, ಯಕೃತ್‌ನಂತಹ ಅಂಗಾಂಗಗಳನ್ನು ಮಾತ್ರ ಸಾಗಿಸುತ್ತಿದ್ದ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿ ಪ್ಲಾಸ್ಮಾ ಸಾಗಿಸಲಾಗಿದೆ.

ಕೊರೋನಾದಿಂದ ಗುಣಮುಖರಾದವರ ಸಹಕಾರ ಕೋರಿದ ಶ್ರೀರಾಮುಲು..!

ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಸಿಜಿ ಆಸ್ಪತ್ರೆ ಕ್ಯಾನ್ಸರ್‌ ತಜ್ಞ ಡಾ.ವಿಶಾಲ್‌ ರಾವ್‌, ಅಂಗಾಂಗಗಳ ಸಾಗಣೆಗೆ ಗ್ರೀನ್‌ ಕಾರಿಡಾರ್‌ ಬಳಕೆ ಮಾಡಲಾಗಿತ್ತು. ಅಂತರ್‌ ರಾಜ್ಯಕ್ಕೆ ಪ್ಲಾಸ್ಮಾ ಸಾಗಣೆ ಮಾಡಲು ಗ್ರೀನ್‌ ಕಾರಿಡಾರ್‌ ಬಳಕೆ ಮಾಡಿದ್ದು ದೇಶದಲ್ಲಿ ಇದೇ ಮೊದಲು. ಪ್ಲಾಸ್ಮಾ ಥೆರಪಿಗೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದ್ದು, ಪ್ಲಾಸ್ಮಾ ಕೊರತೆ ಕಾಡುತ್ತಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು ಎಂದು ಕರೆ ನೀಡಿದರು.

Latest Videos
Follow Us:
Download App:
  • android
  • ios